ಮೈಸೂರು(ನ.14): ಸಿರಿವಂತರು ಸಿರಿವಂತರೊಂದಿಗೆ ಸಂಬಂಧ ಬೆಳೆಸಬೇಕು ಎಂಬ ಹಂಬಲ ಕೆಲವು ಕುಟುಂಬಗಳನ್ನು ಸಂಕಷ್ಟಕ್ಕೆ ದೂಡುತ್ತದೆ. ಸಾಂಸ್ಕೃತಿಕ ನಗರಿಯ ಹೆಣ್ಣು ಮಗಳೊಬ್ಬಳು ಶ್ರೀಮಂತ ಕುಟುಂಬಕ್ಕೆ ವಿವಾಹವಾದ ನಾಲ್ಕೇ ವರ್ಷದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎಲ್ಲವೂ ಇದ್ದು ಗಂಡನ ಮನೆಯವರ ಆಸರೆ ಸಿಗದೇ ಹೋದರೆ ಏನಾಗುತ್ತದೆ ಗೊತ್ತೆ?.
ಭವಿಷ್ಯದ ಕನಸುಗೊಳ್ಳನ್ನು ಹೊತ್ತು ಅದ್ಧೂರಿ ಮದುವೆಯಲ್ಲಿ ಮದುಮಗಳಾಗಿ ನಿಂತವಳು ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದ ಜಗದೀಶ್ ಅವರ ಪುತ್ರಿ ಅಕ್ಷತಾ(25). ಬಾಳಿ ಬದುಕಬೇಕಾದ ವಯಸ್ಸಿನಲ್ಲಿ ಸಾವಿನ ಹಾದಿ ಹಿಡಿಯಲು ಕಾರಣನಾದವನು ಬೇರಾರೂ ಅಲ್ಲ, ಅಕ್ಷತಾ ಪಕ್ಕ ನಿಂತಿರುವ ಗಂಡ ಮಂಜುನಾಥ್. ತನ್ನ ಮೂರು ವರ್ಷದ ಮುದ್ದಾದ ಮಗುವನ್ನೂ ಬಿಟ್ಟು ಈಕೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ.
ಇಷ್ಟಕ್ಕೂ ಈ ಯುವತಿ ಮದುವೆಯಾದದ್ದು ಸಾಮಾನ್ಯರ ಕುಟುಂಬವೇನಲ್ಲ, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪುಟ್ಟೇಗೌಡರದ್ದು ಶ್ರೀಮಂತ ಕುಟುಂಬ. ಇವರ ಪುತ್ರ ಮಂಜುನಾಥ್’ನೊಂದಿಗೆ ನಾಲ್ಕು ವರ್ಷಗಳ ಹಿಂದೆ ವಿವಾಹ ನಡೆದಿತ್ತು. ಜಗದೀಶ್ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳು, ಅಕ್ಷತಾ ಕಿರಿಯ ಮಗಳು. ತಮ್ಮ ಪ್ರತಿಷ್ಠೆಗೆ ತಕ್ಕಂತೆ ಆಕೆಗೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಲಕ್ಷಾಂತರ ರೂ. ವರದಕ್ಷಿಣೆ ಕೊಟ್ಟೇ ಮದುವೆ ಮಾಡಿದ್ದರು. ಇಷ್ಟಾದರೂ ಗಂಡನ ಮನೆಯವರ ವರದಕ್ಷಿಣೆ ದಾಹ ಈವತ್ತು ಅಕ್ಷತಾಳ ಬದುಕನ್ನೇ ಕಸಿದುಕೊಂಡಿದೆ.
ಗಂಡ ಮಂಜುನಾಥ್ ಅವರದ್ದು ಬೆಂಗಳೂರಿನಲ್ಲಿ ಶ್ರೀಮಂತ ಕುಟುಂಬ. ನೂರಾರು ಕೋಟಿ ಆಸ್ತಿಗೆ ಅವರೇ ಒಡೆಯರು. ಆದರೂ ಹಣದ ದಾಹ ಮಾತ್ರ ಇವರಿಗೆ ಕಡಿಮೆ ಇರಲಿಲ್ಲ. ಅಕ್ಷತಾ ಪತಿ ಮಂಜುನಾಥ್ ತನಗೆ ಬಿಎಂಡಬ್ಲ್ಯು ಕಾರು ಕೊಡಿಸುವಂತೆ ಆಕೆಯ ಮೇಲೆ ಒತ್ತಡ ಹಾಕಿದ್ದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಯಿತು.
ಮದುವೆಗಾಗಿ 50 ಲಕ್ಷ, ಮದುವೆ ಸಂದರ್ಭ ವರನಿಗೆ 5 ಲಕ್ಷ ನಗದು, 1 ಕೆಜಿ ಚಿನ್ನ, 2 ಕೆಜಿ ಬೆಳ್ಳಿ, ನಿಶ್ಚಿತಾರ್ಥಕ್ಕೆ 5 ಲಕ್ಷ ಖರ್ಚು, ಮಗುವಾದ ಮೇಲೆ ನಾಮಕರಣಕ್ಕೆ 5 ಲಕ್ಷ ಖರ್ಚು ಹೀಗೆ ತಮ್ಮ ಮಗಳ ಸುಖಕ್ಕಾಗಿ ಜಗದೀಶ್ ಧಾರಾಳವಾಗಿ ಹಣ ವ್ಯಯಿಸುತ್ತಿದ್ದರೂ ಅಳಿಯನಿಗೆ ಮಾತ್ರ ಹಣದ ದಾಹ ನೀಗಲೇ ಇಲ್ಲ. 8 ತಿಂಗಳ ಹಿಂದೆ ಪತ್ನಿಯ ಜೊತೆ ಜಗಳವಾಡಿ, ಬಿಎಂಡಬ್ಲ್ಯು ಕಾರು ತರಲೇಬೇಕೆಂದು ಪಟ್ಟು ಹಿಡಿದು ತವರು ಮನೆಗೆ ಅಟ್ಟಿದ ಭೂಪ ಈ ತನಕ ಮನೆಗೆ ಸೇರಿಸಿರಲಿಲ್ಲ. ಅಷ್ಟಕ್ಕೆ ನಿಲ್ಲಲಿಲ್ಲ ಆತನ ಕಿರುಕುಳ. ಅಕ್ಷತಾ ತನ್ನ ಮನೆಯಲ್ಲಿ ಅತ್ತೆ-ಮಾವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೆಂದು ಬೆಂಗಳೂರು ಕೋರ್ಟ್ನಲ್ಲಿ ಸುಳ್ಳು ಕೇಸು ದಾಖಲಿಸಿದ್ದ. ಅದಕ್ಕಾಗಿ ಗಂಡ-ಹೆಂಡತಿ ಮಧ್ಯೆ 12 ಬಾರಿ ಕೌನ್ಸಿಲಿಂಗ್ ನಡೆದಿದ್ದರೂ ಸಾಮರಸ್ಯ ಮೂಡಿರಲಿಲ್ಲ.
ಅಕ್ಷತಾ ಮಾತ್ರ ಗಂಡನ ಜೊತೆಯಲ್ಲೇ ಜೀವನ ಮಾಡಬೇಕೆಂದು ಬಯಸಿದ್ದಳು. ಆದರೆ ಗಂಡ ಇದನ್ನು ತಿರಸ್ಕರಿಸಿ ಬೇಕಾದರೆ ತಿಂಗಳಿಗೆ 2 ಸಾವಿರ ರೂಪಾಯಿ ಜೀವನಾಂಶ ಕೊಡುತ್ತೇನೆ, ನಿನ್ನ ಯೋಗ್ಯತೆಗೆ ಅದೇ ಲಾಯಕ್ಕು ಅನ್ನುವ ರೀತಿ ನಿಂದನೆ ಮಾಡಿದ್ದು ಅಕ್ಷತಾ ಮನಸು ಕಲ್ಲಾಗಿ ಹೋಗಲು ಕಾರಣವಾಯಿತು. ನಿನ್ನೆ ಮೈಸೂರಿನ ಬೋಗಾದಿ ಬಡಾವಣೆಯಲ್ಲಿದ್ದ ತಂದೆ ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ಪ್ರಾಣ ತ್ಯಜಿಸಿದ್ದಾಳೆ. ಇದಕ್ಕೂ ಮುನ್ನ ಬರೆದಿಟ್ಟ ಡೆತ್’ನೋಟ್’ಲ್ಲಿ ನನ್ನ ಸಾವಿಗೆ ಪತಿ ಮಂಜುನಾಥ್, ಮಾವ ಪುಟ್ಟೇಗೌಡ, ಅತ್ತೆ ಸುಧಾಮಣಿ ಹಾಗೂ ಅತ್ತಿಗೆ ಕಾರಣವೆಂದು ದೂರಿದ್ದಾಳೆ.
ಅಕ್ಷತಾ ಸಾವಿನ ಬಗ್ಗೆ ತಂದೆ ಜಗದೀಶ್ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ಮಗಳ ಸಾವಿಗೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣವೆಂದು ಆರೋಪಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಕ್ಷತಾ ಸಾವಿನಿಂದಾಗಿ ಇಡೀ ಮನೆಯವರು ಕಂಗಾಲಾಗಿ ಹೋಗಿದ್ದಾರೆ. ಮಗಳನ್ನು ಕಳೆದುಕೊಂಡ ಅವರ ಆಕ್ರಂದನ ನೋಡುವವರಲ್ಲಿ ಕಣ್ಣೀರು ತರಿಸುತ್ತದೆ.
ಅಕ್ಷತಾ ಬಿಇ ಪದವೀಧರೆ ಆಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವ ಅವಳದ್ದಲ್ಲ. ಆದರೆ ಒಬ್ಬಳು ಹೆಣ್ಣು ಮಗಳಾಗಿ ಆಕೆ ಎಷ್ಟು ದಿನ ಗಂಡನ ಮನೆಯವರ ಕಿರುಕುಳ ಸಹಿಸಲಾಗುತ್ತದೆ. ಅಷ್ಟೆಲ್ಲಾ ಕಾಟ ಕೊಟ್ಟರೂ ಈ ತನಕ ಆಕೆ ಪೊಲೀಸರಿಗೇನೂ ದೂರು ಕೊಟ್ಟಿರಲಿಲ್ಲ. ಸಮಸ್ಯೆಯನ್ನು ಕುಟುಂಬದೊಳಗೆ ಸರಿಪಡಿಸಿಕೊಳ್ಳಬೇಕೆಂದೇ ಬಯಸಿದ್ದಳು. ಆದರೆ ಗಂಡ-ಹೆಂಡತಿ ಮಧ್ಯೆ ಕೌನ್ಸಿಲಿಂಗ್ ನಂತರವೂ ಗಂಡ ಬದಲಾಗದೇ ಹೋದಾಗ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಅಂತಾರೆ ಅವರ ಸಂಬಂಧಿಕರು.
ಒಟ್ಟಾರೆ ಬಾಳಿ ಬದುಕಬೇಕಾದ ಅಕ್ಷತಾ ವರದಕ್ಷಿಣೆ ಎಂಬ ಪೆಡಂಭೂತಕ್ಕೆ ಬಲಿಯಾಗಿದ್ದಾಳೆ. ಶ್ರೀಮಂತಿಕೆ ಅನ್ನೋದು ಜನರಲ್ಲಿ ಸಹಜ ಸಂಬಂಧ, ಭಾವನೆಗಳನ್ನು ಬೆಸೆಯದೆ ಕೇವಲ ಹಣಕಾಸಿನ ಸುಖದ ಸಾಧನೆವಾಗಿ ಬಳಕೆಯಾಗುತ್ತಿದೆ. ಇಂತಹ ಪ್ರಕರಣಗಳನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.