ಕರ್ನಾಟಕ

ಎಟಿಎಂ ಮುಂದೆ ತಡರಾತ್ರಿಯೂ ಸರದಿ; ಅದೃಷ್ಟ ಇದ್ದರೆ ಮಾತ್ರ ಹಣ!

Pinterest LinkedIn Tumblr

atmm-finalಬೆಂಗಳೂರು: ಹಣ ಲಭ್ಯವಿದ್ದ ಎಟಿಎಂಗಳಿಂದ ಭಾನುವಾರ ತಡರಾತ್ರಿವರೆಗೆ ಸರದಿಯಲ್ಲಿ ನಿಂತು ಜನ ಹಣ ತೆಗೆದುಕೊಂಡರು. ಅಲ್ಲಿಯೂ ಹಣ ಖಾಲಿಯಾದಾಗ ‘ಬಂದ ದಾರಿಗೆ ಸುಂಕವಿಲ್ಲ’, ‘ಅದೃಷ್ಟ ಇದ್ದವರಿಗೆ ದುಡ್ಡು ಸಿಕ್ತುನೋಡಿ’ ಎಂದು ಜನ ಮೂರ್ನಾಲ್ಕು ತಾಸು ಕಾದು ನಿಂತಿದ್ದಕ್ಕೂ ಪ್ರಯೋಜನವಾಗಲಿಲ್ಲವೆಂದು ಹಿಂದಿರುಗಿದರು.

₹500, ₹1,000 ಮುಖಬೆಲೆಯ ನೋಟುಗಳ ಬದಲಾವಣೆ, ಜಮಾವಣೆ, ಖಾತೆಯಿಂದ ಹಣ ತೆಗೆಯಲು ಹಗಲಿನಲ್ಲಿ ಬ್ಯಾಂಕ್‌ಗಳ ಮುಂದೆ ಬೆಳಿಗ್ಗೆಯಿಂದ ಸಂಜೆವರೆಗೆ ಸಾಲಿನಲ್ಲಿ ನಿಂತು ಹಣ ಸಿಗದೆ ಅದೆಷ್ಟೋ ಮಂದಿ ಹಿಂದಿರುಗಿದರು. ಬ್ಯಾಂಕ್‌ಗಳು ಬಾಗಿಲು ಮುಚ್ಚಿದ ಬಳಿಕ ಎಟಿಎಂಗಳಲ್ಲಿ ದೊರೆಯುವ ₹2 ಸಾವಿರವನ್ನಾದರು ತೆಗೆದುಕೊಳ್ಳೋಣ ಎಂದು ಎಟಿಎಂಗಳ ಮುಂದೆ ಸಾಲಿನಲ್ಲಿ ನಿಂತರು. ಅಲ್ಲಿಗೆ ಸಾಲಿನ ಉದ್ದ ಎರಡುಪಟ್ಟಾದವು. ಇಲ್ಲಿವರಗೆ ಕಾದಿದ್ದೇವೆ, ಇನ್ನಷ್ಟುಹೊತ್ತು ಕಾದರೆ ಹಣ ಸಿಗಬಹುದು ಎಂದು ಬ್ಯಾಂಕ್‌ಗಳ ಮುಂದಿದ್ದವರು ಎಟಿಎಂ ಮುಂದೆ ಬಂದು ನಿಂತರು.

ಹಣವೇ ಇಲ್ಲದ ಎಟಿಎಂಗಳು, ಅಲ್ಪ ಸ್ವಲ್ಪ ಹಣವಿದ್ದು ಮಧ್ಯಾಹ್ನಕ್ಕೆ ಖಾಲಿಯಾದ ಎಟಿಎಂಗಳು ಸಂಜೆಗೆ ಬಾಗಿಲು ಹಾಕಿ ‘ನೋ ಕ್ಯಾಷ್‌‘ ಬೋರ್ಡ್‌ ನೇತುಹಾಕಿದ್ದವು. ಅಲ್ಲೊಂದು ಇಲ್ಲೊಂದು ಎಟಿಎಂಗಳಲ್ಲಿ ರಾತ್ರಿ 8/9ರವರೆಗೆ ಹಣ ಲಭ್ಯವಿದ್ದವು. ಅವೂ ಖಾಲಿಯಾದವು.

ಬಸವೇಶ್ವರ ನಗರ ಮುಖ್ಯ ರಸ್ತೆಯಲ್ಲಿನ ಕೆನರಾಬ್ಯಾಂಕ್‌ನ ಎಟಿಎಂನಲ್ಲಿ ಹಣ ಲಭ್ಯವಿದ್ದುದರಿಂದ ರಾತ್ರಿ 11.30ರಲ್ಲೂ ಉದ್ದದ ಸಾಲಿತ್ತು. ಹಣ ಪಡೆದವರು ‘ಅಪ್ಪಾ ಅಂತು ಇಂತು ಸಿಕ್ತು ಒಂದೆರೆಡು ಸಾವಿರ!’ ಎಂದು ನಗುಮೊಗದಿಂದಲೇ ಹೊರ ನಡೆದರು. ಸಾಲಿನಲ್ಲಿ ನಿಂತಿದ್ದವರು, ‘ಎನ್ರಿ ದುಡ್ಡು ಬಂತಾ? ನಮಗೂ ಸಿಗುತ್ತಾ? ಎಂದು ಕೇಳುತ್ತಿದ್ದರು’. ಹಣ ಪಡೆದು ಹೊರ ನಡೆದ ವ್ಯಕ್ತಿ, ‘ನಿಮಗೆ ಸಿಗುತ್ತೊ ಇಲ್ಲೊ ಗೊತ್ತಿಲ್ಲ… ನನಗಂತು ಮೂರು ಕಾರ್ಡ್‌ನಿಂದ ₹6,000 ಸಿಕ್ತು’… ಎಂದು ಹೇಳಿ ಹೊರ ನಡೆದಾಗ ಸರದಿಯಲ್ಲಿ ನಿಂತಿದ್ದವರು ಹಣ ಸಿಗುತ್ತೊ ಇಲ್ವೊ, ನೋಡೋಣ ಸಿಕ್ಕರೆ ಅದೃಷ್ಟ! ಎಂದು ಕಾದು ನಿಂತರು.

ಸರದಿಯಲ್ಲಿ ನಿಂತಿದ್ದವರು ತಮ್ಮ, ತಮ್ಮ ಕುಟುಂಬದವರ ತಲಾ ಮೂರು, ನಾಲ್ಕು ಎಟಿಎಂ ಕಾರ್ಡ್‌ಗಳಿಂದ ಹಣ ತೆಗೆಯುತ್ತಿದ್ದುದರಿಂದ ಸಾಲು ಮುಂದೆ ಸಾಗುತ್ತಲೇ ಇರಲಿಲ್ಲ. 11.30ರಲ್ಲೂ ಎಟಿಎಂ ಮುಂದೆ ಜನ ಇರುವುದನ್ನು ಕಂಡ ದಾರಿಹೋಕರು ಇನ್ನೂ ಹಣ ಬರುತ್ತೇನ್ರಿ ಎಂದು ಕೇಳಿ ಸರದಿಯಲ್ಲಿ ನಿಲ್ಲುತ್ತಿದ್ದಂತೆ ಸಾಲು ಮತ್ತಷ್ಟು ಬೆಳೆಯುತ್ತಿತು.

ಎರಡು ಮೂರು ತಾಸಿನಿಂದ ಕಾದಿದ್ದೇವೆ, ನನಗಿಂತ ಮುಂದೆ ನಾಲ್ಕಾರು ಜನ ಇದ್ದಾರೆ, ಇನ್ನೇನು ನನಗೂ ಸಿಕ್ಕೇಬಿಡುತ್ತೆ ಎಂಬ ಒಂದಷ್ಟು ಭರವಸೆ ಇಟ್ಟುಕೊಂಡು ನಿಂತಿದ್ದವರು 11.40ಕ್ಕೆ ಹಿಂದೆ ಬೆಳೆಯುತ್ತಿದ್ದ ಸಾಲನ್ನೊಮ್ಮೆ ನೋಡುತ್ತಿದ್ದರು. ಮುಂದಿದ್ದವರು ಒಬ್ಬೊಬ್ಬರೇ ಹೊರ ಹೋದಂತೆ ತುಸು ಖುಷಿಯಿಂದಲೇ ಮುಂದೆ ಹೋಗುತ್ತಿದ್ದರು.

ಮುಂದಿದ್ದವರು ತಲಾ ಎರಡು/ಮೂರು ಕಾರ್ಡ್‌ಗಳಿಂದ ಹಣ ತೆಗೆಯುತ್ತಿದ್ದುದರಿಂದ ತಡವಾಗುತ್ತಿತ್ತು. 11.46ಕ್ಕೆ ಎಟಿಎಂ ‘ಟ್ರಾನ್ಸಾಕ್ಷನ್‌ ಡಿಕ್ಲೇನ್ಡ್‌’ ಎಂಬ ಸಂದೇಶ ತೋರಿಸಿ ಹಣ ಕೊಡುವುದನ್ನು ನಿಲ್ಲಿಸಿಯೇಬಿಟ್ಟಿತು!

ಹಿಂದಿದ್ದ ನಾಲ್ಕಾರು ಮಂದಿ ತಮ್ಮ ಕಾರ್ಡಿಗೇನಾದರು ಬರುತ್ತಾ ಎಂದು ಪರೀಕ್ಷಿಸಿದರು. ಆಗಲೂ ಅದೇ ಸಂದೇಶ ನೀಡಿತು. ಇನ್ನು ಕೆಲವರು ₹,1000 ಮೊತ್ತ ನಮೂದಿಸಿ ನೋಡಿದರು. ಆಗಲೂ ನೀಡಲಿಲ್ಲ.

ಕೊನೆ ಪ್ರಯತ್ನ: ಕೊನೆಯ ಪ್ರಯತ್ನವಾಗಿ ₹500, ₹400. ₹300, ₹200 ಮೊತ್ತವನ್ನು ನಮೂದಿಸುತ್ತಾಹೋದರು. ಕಟ್ಟಕಡೆಯದಾಗಿ ₹100 ಒಂದು ನೋಟು ಉಳಿದಿದ್ದರೆ ಅದಾದರೂ ಸಿಗಲಿ ಎಂದು ಆ ಮೊತ್ತವನ್ನೂ ನಮೂದಿಸಿದರು. ಆಗಲೂ ಎಟಿಎಂ ಪರದೆ ಮೇಲೆ ‘ಟ್ರಾನ್ಸಾಕ್ಷನ್‌ ಡಿಕ್ಲೇನ್ಡ್‌’ ಸಂದೇಶ ಬಂತು.

ಇಷ್ಟೊತ್ತು ಕಾದದ್ದಕ್ಕೂ ಸಾರ್ಥಕವಾಗಲಿಲ್ಲ. ‘ಬಂದ ದಾರಿಗೆ ಸುಂಕ ಇಲ್ಲ’ ಎನ್ನುವಂತಾಯಿತು. ನಮ್ಮದು ಅದೃಷ್ಟ ಇಲ್ಲ! ಛೆ!! ಎಂದು ತಡ ರಾತ್ರಿ 12ರವರೆಗೆ ಎಲ್ಲ ಬಗೆಯ ಕಸರತ್ತು ನಡೆಸಿ, ಇದ್ದ ಒಂದಷ್ಟು ಭರವಸೆಯನ್ನೂ ಕಳೆದುಕೊಂಡು ಹ್ಯಾಪುಮೋರೆ ಹಾಕಿ ಮನೆಯತ್ತ ನಡೆದರು…

Comments are closed.