ಬೆಂಗಳೂರು, ನ. ೧೪ – ಅಶ್ಲೀಲ ಚಿತ್ರ ವೀಕ್ಷಣೆ ವಿವಾದಕ್ಕೆ ಸಿಲುಕಿರುವ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಸಚಿವ ಸ್ಥಾನದ ತಲೆದಂಡದಿಂದ ಸದ್ಯಕ್ಕೆ ಪಾರಾಗಿದ್ದು, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೇಲ್ನೋಟಕ್ಕೆ ಸಚಿವ ತನ್ವೀರ್ ಸೇಠ್ ತಪ್ಪು ಮಾಡಿಲ್ಲ ಎಂದು ಹೇಳುವ ಮೂಲಕ ತನ್ವೀರ್ ಸೇಠ್ ಅವರ ರಕ್ಷಣೆಗೆ ಬಂದಿದ್ದಾರೆ.
ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ವೀರ್ ಸೇಠ್ ರಾಜೀನಾಮೆ ನೀಡಬೇಕು ಎನ್ನುವ ಬಿಜೆಪಿಯ ಆಗ್ರಹವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ಹೇಳಿದಂತೆ ಕೇಳುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.
ರಾಯಚೂರಿನಲ್ಲಿ ಟಿಪ್ಪು ಜಯಂತಿ ಸಮಾರಂಭದಲ್ಲಿ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದಲ್ಲಿ ತಪ್ಪು ಮಾಡಿದಂತಿಲ್ಲ, ಆದರೂ ಈ ಬಗ್ಗೆ ಸಿಐಡಿಯ ಸೈಬರ್ ವಿಭಾಗದ ಪೊಲೀಸರಿಂದ ವಿಚಾರಣೆ ನಡೆಸಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಶ್ಲೀಲ ಚಿತ್ರ ವೀಕ್ಷಣೆಗೆ ಸಂಬಂಧಿಸಿದಂತೆ ನಿನ್ನೆ ಸಚಿವ ತನ್ವೀರ್ ಸೇಠ್ ಅವರು ತಮ್ಮನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ. ಅವರು ವಿವರಣೆ ನೀಡಿದ ತಕ್ಷಣ ಎಲ್ಲವನ್ನೂ ಒಪ್ಪಿಕೊಂಡಂತಲ್ಲ. ಮೇಲ್ನೋಟಕ್ಕೆ ಅವರು ತಪ್ಪು ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೂ ಸೈಬರ್ ಪೊಲೀಸರಿಂದ ವಿಚಾರಣೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ 127ನೇ ಜಯಂತಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ನೆಹರೂರವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ತನ್ವೀರ್ ಸೇಠ್ ರಾಜೀನಾಮೆ ನೀಡಬೇಕು ಎಂಬ ಬಿಜೆಪಿ ಅವರ ಬೇಡಿಕೆಯನ್ನು ತಳ್ಳಿ ಹಾಕಿ ಬಿಜೆಪಿ ಅವರು ಹೇಳಿದಂತೆ ಕೇಳಲು ಸಾಧ್ಯವಿಲ್ಲ, ತನ್ವೀರ್ ಸೇಠ್ ತಪ್ಪು ಮಾಡಿದಂತೆ ಕಾಣುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ತಮ್ಮನ್ನು ವರದಿ ಕೇಳಿಲ್ಲ, ಕೆಪಿಸಿಸಿ ಅಧ್ಯಕ್ಷರ ಜತೆ ವರಿಷ್ಠ ನಾಯಕರು ಮಾತನಾಡಿ, ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.