ಕರ್ನಾಟಕ

ಇನ್ನು ಮುಂದೆ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಸ್ಕರ್ಟ್ ಬದಲು ಚೂಡಿದಾರ್ ಭಾಗ್ಯ

Pinterest LinkedIn Tumblr
SSLC students of Swamy Vivekananda School in Thanisandra in protest against school management for not getting their hall tickets for the for the class ten exammination on Wednesday. DH Photo.
SSLC students 

ಬೆಂಗಳೂರು: ಮುಂದಿನ ವರ್ಷದಿಂದ 8,9,10 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಕರ್ಟ್ ಬದಲು ಚೂಡಿದಾರ್ ವಿತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಟೆಂಡರ್ ಕರೆಯುವ ಮೂಲಕ ಮುಂದಿನ ವರ್ಷದಿಂದ ಮಕ್ಕಳಿಗೆ ಸಮವಸ್ತ್ರ, ಸೈಕಲ್ ಮತ್ತು ಶೂ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಸಮವಸ್ತ್ರಗಳು ಸಕಾಲದಲ್ಲಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ಈ ಬಾರಿ ನವೆಂಬರ್‍ನಲ್ಲೇ ಟೆಂಡರ್ ಕರೆಯಲಾಗುವುದು. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಕಾಪಾಡಲು ಅಡುಗೆಯಾದ ಕೂಡಲೇ ಅದನ್ನು ಕ್ಲಸ್ಟರ್ ಮಟ್ಟದಲ್ಲಿ ತೆರಯಲಾಗಿರುವ ಪ್ರಯೋಗಾಲಯದಲ್ಲಿ ಸ್ಯಾಂಪಲ್ ಪರೀಕ್ಷೆ ಮಾಡಲಾಗುವುದು. ಪ್ರಯೋಗಿಕ ಪ್ರಯೋಗಾಲಯಗಳು ಮೈಸೂರು ಮತ್ತು ಮಂಡ್ಯದಲ್ಲಿ ನಿರ್ವಹಿಸುತ್ತಿದೆ. ಇವುಗಳ ಕಾರ್ಯದಕ್ಷತೆ ಪರಿಶೀಲಿಸಿ ಕ್ಲಸ್ಟರ್ ವ್ಯಾಪ್ತಿಗೆ ವಿಸ್ತರಿಸುತ್ತೇವೆ ಎಂದು ತನ್ವೀರ್ ಸೇಠ್ ಹೇಳಿದರು.

ಶಿಕ್ಷಕರ ನೇಮಕ: ಸದ್ಯ 14,589 ಶಿಕ್ಷಕರ ಕೊರತೆ ಇದೆ. ಈ ವರ್ಷ 10 ಸಾವಿರ ಶಾಲಾ ಶಿಕ್ಷಕರನ್ನು ನೇಮಕ ಮಾಡಲು ಸಿಎಂ ಅನುಮೋದನೆ ನೀಡಿದ್ದಾರೆ. ಇನ್ನುಳಿದ 4 ಸಾವಿರ ಶಿಕ್ಷಕರನ್ನು ಮುಂದಿನ ವರ್ಷ ನೇಮಕಾತಿ ಮಾಡಿಕೊಳ್ಳಾಗುವುದು ಎಂದು ಅವರು ವಿವರಿಸಿದರು.

ಶಿಕ್ಷಣ ಇಲಾಖೆಯಲ್ಲಿ ಅವಶ್ಯಕ ಹುದ್ದೆ ಭರ್ತಿಗೊಳಿಸಲು ಚಿಂತನೆ ನಡೆಸಿದ್ದು ಅಗತ್ಯಕ್ಕಿಂತ ಹೆಚ್ಚಿರುವ ಹುದ್ದೆಗಳನ್ನು ವಿಸರ್ಜಿಸಲು ನಿರ್ಧರಿಸಲಾಗಿದೆ. ಆಡಳಿತಕ್ಕೆ ಚುರುಕು ಮತ್ತು ಇಲಾಖೆಗೆ ಚೈತನ್ಯ ತುಂಬಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೇ ಕಳೆದ ಬಾರಿಯ ಪಿಯು ಪೇಪರ್ ಲೀಕ್ ನಂತಹ ಗಂಭೀರ ಸಮಸ್ಯೆ ಕಡಿವಾಣ ಹಾಕಲು ಈ ಬದಲಾವಣೆ ಮಾಡಲಾಗಿದೆ. ಇಲಾಖೆಯನ್ನು ಜನಸ್ನೇಹಿ, ವಿದ್ಯಾರ್ಥಿ ಸ್ನೇಹಿಯಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತನ್ವೀರ್ ಸೇಠ್ ಹೇಳಿದರು.

ಎನ್‍ಸಿಆರ್‍ಟಿ ಪಠ್ಯವನ್ನು ಸದ್ಯಕ್ಕೆ ವಿಜ್ಞಾನ ವಿಷಯದಲ್ಲಿ ಜಾರಿಗೆ ತರಲಾಗಿದ್ದು ಮುಂದೆ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ತರಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಪಿಯು ಉಪನ್ಯಾಸಕರ ಮೌಲ್ಯಮಾಪನ ಬಹಿಷ್ಕಾರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಸಮಸ್ಯೆ, ಬೇಡಿಕೆ ವಿಚಾರದ ಬಗ್ಗೆ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಸರ್ಕಾರ ಈಡೇರಿಸಬಹುದಾಗಿದ್ದ ಮನವಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

Comments are closed.