ಕರ್ನಾಟಕ

ಸಿಟಿ ಮಾರ್ಕೆಟ್ ಅವ್ಯವಸ್ಥೆ: ಸಿಬ್ಬಂದಿ ವೇತನಕ್ಕೆ ಕತ್ತರಿ ಹಾಕಿದ ಮೇಯರ್

Pinterest LinkedIn Tumblr

meyarಬೆಂಗಳೂರು, ಅ. ೧೪- ಎಲ್ಲೆಲ್ಲೂ ಕಸದ ರಾಶಿ, ಗುಂಡಿ ಬಿದ್ದ ರಸ್ತೆಗಳು, ಅಂಗಡಿಗಳ ಮುಂದೆ ರಾಜಾರೋಷವಾಗಿ ಒತ್ತುವರಿ, ಗಬ್ಬೆದು ತಿಪ್ಪೆಗುಂಡಿಯಂತಾಗಿರುವ ಕೆ.ಆರ್. ಮಾರುಕಟ್ಟೆಯ ಅವ್ಯವಸ್ಥೆ ಕಂಡು ಮೇಯರ್ ಪದ್ಮಾವತಿ ಸಿಟ್ಟಿಗೆದ್ದಿದ್ದು, ಮುಂದಿನ ವಾರದೊಳಗೆ ಇಡೀ ಮಾರುಕಟ್ಟೆ ಸ್ವಚ್ಛವಾಗದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೇಯರ್ ಆದ ಬಳಿಕ ಇದೇ ಮೊದಲ ಬಾರಿಗೆ ಉಪಮೇಯರ್ ಆನಂದ್ ಅವರೊಂದಿಗೆ ಕೆ.ಆರ್. ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಮೇಯರ್ ಪದ್ಮಾವತಿ, ಮಾರುಕಟ್ಟೆ ಅವ್ಯವಸ್ಥೆ, ನೈರ್ಮಲ್ಯ ಇಲ್ಲದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು.
ಕಸದ ರಾಶಿಯ ಮಧ್ಯೆಯೇ ಇಡೀ ಮಾರುಕಟ್ಟೆಯನ್ನು ಅಡ್ಡಾಡಿದ ಮೇಯರ್, ಎಲ್ಲೆಲ್ಲೂ ಕಸದ ರಾಶಿ ಕಂಡು ಕೆಂಡಾಮಂಡಲವಾದರು. ಸ್ವಚ್ಛತೆ ಕಾಪಾಡದ ಮಾರುಕಟ್ಟೆ ನಿರ್ವಹಣಾ ಇಂಜಿನಿಯರ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.
ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದರೂ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿ ತೋರಿಸಿರುವ 50 ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳಿಗೆ 15 ದಿನಗಳ ವೇತನವನ್ನು ಕಡಿತಗೊಳಿಸಬೇಕು ಎಂದು ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ಕತ್ತಲಲ್ಲೇ ಅಡ್ಡಾಡಿದ ಮೇಯರ್, ನಾಳೆಯೊಳಗೆ ವಿದ್ಯುತ್ ದೀಪಗಳನ್ನು ಅಳವಡಿಸದಿದ್ದಲ್ಲಿ ಪ್ರತಿ ವಿದ್ಯುತ್ ದೀಪಕ್ಕೆ ಒಂದರಂತೆ 1 ಸಾವಿರ ರೂ.ಗಳ ದಂಡ ತೆರಬೇಕಾಗುತ್ತದೆ ಎಂದು ಎಂಜಿನಿಯರ್‌ಗಳಿಗೆ ಎಚ್ಚರಿಸಿದರು.
ಶೌಚಾಲಯದಲ್ಲಿ ಗಬ್ಬುನಾತ ಬೀರುತ್ತಿದ್ದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಾಗುತ್ತಿದ್ದದ್ದು ಮೇಯರ್ ಕಣ್ಣಿಗೆ ಬಿತ್ತು. ಕೂಡಲೇ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ವ್ಯಾಪಾರಿಗಳು, ಪಾಲಿಕೆ ಸಿಬ್ಬಂದಿಗಳು ಎಲ್ಲರೂ ಒಟ್ಟಾಗಿ ಸೇರಿ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಶನಿವಾರ ನಾನೇ ಖುದ್ಧು ಇಲ್ಲಿಗೆ ಬರುತ್ತೇನೆ. ಸ್ವಚ್ಛತೆ ಕಾಪಾಡದವರ ವಿರುದ್ಧ ಎಂತಹ ಕಠಿಣ ಕ್ರಮ ಕೈಗೊಳ್ಳಲು ಸಿದ್ಧ ಎಂದು ಎಚ್ಚರಿಸಿದರು.
ಅಂಗಡಿಗಳ ಮುಂದೆ ಗ್ರಾಹಕರಾಗಲಿ, ಮಾಲೀಕರಾಗಲಿ ಕಸ ಎಸೆದರೆ ಪಾಲಿಕೆ ಸಿಬ್ಬಂದಿಗಳು ತಕ್ಷಣ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು ಎಂದು ಸೂಚಿಸಿದರು.
ಮೊದಲ ಹಂತದಲ್ಲಿ ಕಸವನ್ನು ತೆಗೆದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಎರಡನೇ ಹಂತದಲ್ಲಿ ಪಾಲಿಕೆಗೆ ಆದಾಯ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಮಾರುಕಟ್ಟೆಯ ಸೆಲರ್‌ನಲ್ಲಿ ಗಲೀಜು ಹೆಚ್ಚಾಗಿದೆ. ನಾಳೆಯೊಳಗೆ ತೆಗೆಸುವಂತೆ ಸೂಚಿಸಿದ್ದೇನೆ ಎಂದ ಅವರು, ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಮಾರುಕಟ್ಟೆ ಆವರಣದಲ್ಲಿರುವ ಬಯೋಮೆಟಾಜೈಜೇಷನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಅದರ ಬಗ್ಗೆ ವಿವರವಾದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಾರುಕಟ್ಟೆಯಲ್ಲಿ ಮಿತಿಮೀರಿದ ಕಸ ಹಾಕಲಾಗಿದೆ. ಹಂತ ಹಂತವಾಗಿ ಕಸ ತೆಗೆಯಬೇಕು. ಇಲ್ಲದಿದ್ದಲ್ಲಿ ಪಾಲಿಕೆ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ಪೌರ ಕಾರ್ಮಿಕರು ಕಸದ ರಾಶಿ ತೆಗೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಅಲ್ಲದೆ, ಈ ಕಾರ್ಮಿಕರು ಅಗತ್ಯ ಸೌಲಭ್ಯವಿಲ್ಲದೆ ಕಸ ತೆಗೆಯುತ್ತಿದ್ದಾರೆ ಎಂಬ ದೂರುಗಳು ಇವೆ. ಗುತ್ತಿಗೆದಾರರು ಅವರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

Comments are closed.