ಹುಳಿಯಾರು, ಆ.18-ವರುಣ ಮುನಿಸಿಕೊಂಡರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಅವನ ಕೃಪೆಗಾಗಿ ವಿಚಿತ್ರ ಆಚರಣೆಗಳು ಆರಂಭವಾಗುತ್ತವೆ. ಅದು ವೈಜ್ಞಾನಿಕವೋ, ನಂಬಿಕೆಯೋ, ಮೂಡನಂಬಿಕೆಯೋ ಅದು ನಗಣ್ಯವಾಗಿ ಒಮ್ಮೆ ಮಳೆ ಬಂದರೆ ಸಾಕು ಎಂದುಕೊಳ್ಳುವವರೇ ಹೆಚ್ಚು. ಕಪ್ಪೆಗಳ ಮದುವೆ, ಮಳೆರಾಯನಪೂಜೆ, ಕತ್ತೆ ಮದುವೆ ಹೀಗೆ ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆಗಳನ್ನು ಮಾಡುತ್ತಾರೆ.
ಅದೇ ರೀತಿ ಮಳೆರಾಯ ಸಿಟ್ಟಾದ ಪರಿಣಾಮ ಹೋಬಳಿಯ ಸುತ್ತಮುತ್ತ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.
ಲಕ್ಷಾಂತರ ಎಕರೆಯಲ್ಲಿ ಬಿತ್ತಿರುವ ರಾಗಿ ಮಳೆಗಾಗಿ ಎದುರು ನೋಡುತ್ತಿದೆ. ಹಾಗಾಗಿ ಹೊಯ್ಸಲಕಟ್ಟೆ ಗ್ರಾಪಂ ವ್ಯಾಪ್ತಿಯ ಕಲ್ಲೇನಹಳ್ಳಿ ಗ್ರಾಮಸ್ಥರು ಸೋಮವಾರ ಕತ್ತೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯ ಬೆನ್ನು ಹತ್ತಿ ಕತ್ತೆಗಳನ್ನು ಹಿಡಿದು ತಂದು ಮದುವೆ ಮಾಡಿ ಸಂಭ್ರಮಿಸಿದರು.ಕತ್ತೆಗಳಿಗೆ ಹೊಸ ಬಟ್ಟೆ ತೊಡಿಸಿ, ಅರಿಸಿನ, ಕುಂಕುಮ ಹಚ್ಚಿ, ಬಾಸಿಂಗ ಕಟ್ಟಿ, ಹೂಮಾಲೆ ಹಾಕಿ ವಧುವರರ ರೀತಿಯಲ್ಲೇ ಅಲಂಕರಿಸಿದರು. ನಂತರ ಗ್ರಾಮದ ಯುವಕರೊಬ್ಬರಿಂದ ತಾಳಿ ಕಟ್ಟಿಸಿ, ಧಾರೆ ಎರೆದು, ಅಕ್ಷತೆ ಹಾಕಿ ವಾದ್ಯದ ಸಹಿತ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಉದ್ದಕ್ಕೂ ಉಯ್ಯೋ, ಉಯ್ಯೋ ಮಳೆರಾಯ ತೋಟ, ಹೊಲ ಒಣಗಿದೆ ಹೆಸರು ಬೆಳೆಗೆ ನೀರಿಲ್ಲ ಹೀಗೆ ಹಾಡುಗಳನ್ನು ಹಾಡಿ ಮಳೆರಾಯನ ಒಲಿಸಿಕೊಳ್ಳುವ ಪ್ರಯತ್ನ ನಡೆಸಿದರು.ವೃದ್ಧರು ಮಕ್ಕಳೆನ್ನದೆ ಅನೇಕ ಮಂದಿ ಈ ವಿಚಿತ್ರ ಆಚರಣೆಯಲ್ಲಿ ಪಾಲ್ಗೊಂಡು ಮಳೆಗಾಗಿ ಕೈ ಎತ್ತಿ ಮುಗಿದು ಪ್ರಾರ್ಥಿಸಿದರು. ನಂತರ ಗ್ರಾಮದ ದೇವರುಗಳಾದ ಶ್ರೀಈಶ್ವರ ಹಾಗೂ ಶ್ರೀನಂದಿಬಸವೇಶ್ವರ ದೇವರುಗಳಿಗೆ ಕುಂಭಾಬಿಷೇಕ ಮಾಡಿಸಿ ವಿಶೇಷ ಪೂಜೆ ಮಾಡಿ ಸಿಹಿ ವಿತರಿಸಿದರು. ಗ್ರಾಮೀಣ ಜನರ ಈ ಆಚರಣೆಯಿಂದ ಕಲ್ಲಾಗಿರುವ ವರುಣ ಕರಗಿ ಹನಿಹನಿಯಾಗಿ ನೇಗಿಲ ಯೋಗಿಯ ಬಾಳು ಹಸನಾಗಿಸಲಿ ಎನ್ನುವುದೇ ಎಲ್ಲರ ಹಾರೈಕೆ.
Comments are closed.