ಕರ್ನಾಟಕ

1.30ಲಕ್ಷದಿಂದ 2ಲಕ್ಷಕ್ಕೆ:ಮತ್ತೆ ವೇತನ ಹೆಚ್ಚಳಕ್ಕೆ ಶಾಸಕರ ಬೇಡಿಕೆ

Pinterest LinkedIn Tumblr

vidana-soudaಬೆಂಗಳೂರು: ಸರಕಾರಿ ನೌಕರರು, ಶಿಕ್ಷಕರು- ಉಪ ನ್ಯಾಸಕರು, ಸಾರಿಗೆ ಸಿಬಂದಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ಕ್ಕಿಳಿದರೆ ಚೌಕಾಸಿ ಮಾಡುವ ರಾಜ್ಯ ಸರಕಾರಕ್ಕೆ ಈಗ ವರ್ಷದಲ್ಲಿ 2ನೇ ಬಾರಿಗೆ ಶಾಸಕರ ವೇತನಧಿ- ಭತ್ತೆ ಹೆಚ್ಚಳ ಪ್ರಸ್ತಾವ ಬಂದಿದೆ.

ಕಳೆದ ವರ್ಷವಷ್ಟೇ ಶೇ. 40ರಷ್ಟು ವೇತನ-ಭತ್ತೆ ಹೆಚ್ಚಿಸಿಕೊಂಡಿದ್ದ ಶಾಸಕರು ಈಗ ಮತ್ತೆ ಅದೇ ಪ್ರಮಾಣದಲ್ಲಿ ವೇತನ-ಭತ್ತೆ ಹೆಚ್ಚಳ ಮಾಡಿ ಎಂಬ ಬೇಡಿಕೆ ಮುಂದಿಟ್ಟಿದ್ದು, ಈ ವಿಚಾರದಲ್ಲಿ ಪಕ್ಷಾತೀತವಾಗಿ ಸರಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ವೇತನ-ಭತ್ತೆ ಸಹಿತ ಮಾಸಿಕ 95 ಸಾವಿರ ರೂ.ವರೆಗೂ ಪಡೆಯುತ್ತಿದ್ದ ಶಾಸಕರು, ಪರಿಷ್ಕರಣೆ ಅನಂತರ 1.30 ಲಕ್ಷ ರೂ. ವರೆಗೆ ಗಳಿಸುತ್ತಿದ್ದಾರೆ. ಈ ಪ್ರಮಾಣವನ್ನು ಈಗ 1.75 ಲಕ್ಷ ರೂ. ಅಥವಾ 2 ಲಕ್ಷ ರೂ. ವರೆಗೆ ಹೆಚ್ಚಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ ಎಂದು ಹೇಳಲಾಗಿದೆ.

ಜೆಡಿಎಸ್‌ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಬಿ.ಬಿ. ನಿಂಗಯ್ಯ ಹಾಗೂ ಎಚ್‌.ಕೆ. ಕುಮಾರಸ್ವಾಮಿಯವರು ಶಾಸಕರ ವೇತನ ಹೆಚ್ಚಳ ಸಂಬಂಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಸ್ಪೀಕರ್‌ ಕೋಳಿವಾಡ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕರ ವೇತನ ಹೆಚ್ಚಳಕ್ಕೆ 2015ರಲ್ಲಿ ಕರ್ನಾಟಕ ಸಚಿವರು ಮತ್ತು ಶಾಸಕರ ವೇತನ ಕಾಯ್ದೆಗೆ ತಿದ್ದುಪಡಿ ತಂದು ಮುಖ್ಯಮಂತ್ರಿ, ಸ್ಪೀಕರ್‌, ವಿಧಾನ ಪರಿಷತ್‌ ಸಭಾಪತಿ, ಸಚಿವರು, ರಾಜ್ಯ ಸಚಿವರು ಹಾಗೂ ಶಾಸಕರ ವೇತನವನ್ನು ಹೆಚ್ಚಿಸಲಾಗಿತ್ತು.

ಸಿಎಂಗೆ 50 ಸಾವಿರ, ಸಂಪುಟ ದರ್ಜೆ ಸಚಿವರಿಗೆ 40 ಸಾವಿರ, ರಾಜ್ಯ ಸಚಿವರಿಗೆ 30 ಸಾವಿರ ಹಾಗೂ ಶಾಸಕರಿಗೆ 25 ಸಾವಿರ ರೂ. ವೇತನ ನಿಗದಿ ಮಾಡಲಾಗಿತ್ತು. ಜತೆಗೆ ಕ್ಷೇತ್ರ ಭತ್ತೆ, ಪ್ರವಾಸ ಭತ್ತೆ, ಹೊಟೇಲ್‌ ಭತ್ತೆ, ದೂರವಾಣಿ ಭತ್ತೆ ಸಹಿತ ಸದ್ಯ ಪ್ರತಿ ತಿಂಗಳು ಶಾಸಕರಿಗೆ ತಲಾ 1,30,000 ರೂ. ವರೆಗೂ ಸಂದಾಯವಾಗುತ್ತಿದೆ.

ಶಾಸಕರು ಯಾವುದಾದರೂ ಸಮಿತಿಯ ಅಧ್ಯಕ್ಷರು ಅಥವಾ ಸದಸ್ಯರಾದರೆ ವಿಶೇಷ ಭತ್ತೆ ನೀಡಲಾಗುತ್ತದೆ. ಯಾವುದಾದರೂ ಜಿಲ್ಲಾ ಪ್ರದೇಶಗಳಿಗೆ ಪ್ರವಾಸ ಹೋದರೂ ವಿಶೇಷ ಭತ್ತೆ ನೀಡ ಲಾಗುತ್ತದೆ. ಇಷ್ಟಾದರೂ ವೇತನ ಹೆಚ್ಚಳಗೊಂಡ ಒಂದು ವರ್ಷದಲ್ಲೇ ಮತ್ತೂಮ್ಮೆ ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ.

ಶಾಸಕರಿಗೆ ಅತೀ ಹೆಚ್ಚು ವೇತನ-ಭತ್ತೆ ನೀಡುವ ರಾಜ್ಯಗಳ ಪಟ್ಟಿ ಯಲ್ಲಿ ದೇಶದಲ್ಲೇ ಕರ್ನಾಟಕ 4ನೇ ಸ್ಥಾನದಲ್ಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶಾಸಕರು ವೇತನ-ಭತ್ತೆ, ಸಮಿತಿಗಳ ಭತ್ತೆಯನ್ನು ತುಸು ಹೆಚ್ಚಾಗಿಯೇ ಪಡೆಯುತ್ತಿದ್ದಾರೆ. ಶಾಸಕರಿಗೆ ವೇತನ-ಭತ್ತೆ ಹೆಚ್ಚಿಸಿದರೆ ಸಹಜವಾಗಿ ಅದು ಮುಖ್ಯಮಂತ್ರಿ, ಸಂಪುಟ ಮತ್ತು ರಾಜ್ಯ ಸಚಿವರಿಗೂ ಅನ್ವಯವಾಗಲಿದೆ.

-ಉದಯವಾಣಿ

Comments are closed.