ಬೆಂಗಳೂರು, ಆ. ೧೨ – ರಾಜ್ಯ ಬಿ.ಜೆ.ಪಿ. ನಾಯಕರಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ, ಅತೃಪ್ತಿ ಈ ತಿಂಗಳ 16 ರಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ.
ನಾಯಕರ ಮಧ್ಯೆ ಪಕ್ಷದಲ್ಲಿ ಹೊಗೆಯಾಡುತ್ತಿರುವ ಅಸಮಾಧಾನ, ಅತೃಪ್ತಿಗೆ ತೆರೆ ಎಳೆಯಲು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ತಿಂಗಳ 16 ರಂದು ಮಹತ್ವದ ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಪಕ್ಷದಲ್ಲಿ ಮೇಲುಗೈ ಸಾಧಿಸಲು `ಅಹಿಂದ್ ಹಾಗೂ ಜೈಹಿಂದ್’ ನಡುವೆ ಶಕ್ತಿ ಪ್ರದರ್ಶನ ನಡೆಯುವುದನ್ನು ತಳ್ಳಿ ಹಾಕುವಂತಿಲ್ಲ.
ರಾಜ್ಯ ಬಿ.ಜೆ.ಪಿಯ ನೂತನ ಅಧ್ಯಕ್ಷರಾಗಿ ಯಡಿಯೂರಪ್ಪ ನೇಮಕವಾದ ನಂತರ ಹೊಸದಾಗಿ ರಚನೆಯಾದ ಕೋರ್ ಕಮಿಟಿಯ ಮೊದಲ ಸಭೆ ಇದಾಗಿದ್ದು, ಈ ಸಭೆಯಲ್ಲಿ ಕೆಲ ನಾಯಕರುಗಳು ತಮ್ಮ ಅಸಮಾಧಾನ ಹೊರ ಹಾಕಲಿದ್ದು, ಬಿರುಸಿನ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಪಕ್ಷದ ಕೆಲ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಈ ಬಗ್ಗೆ ಪಕ್ಷದ ವರಿಷ್ಠರಿಗೂ ದೂರು ನೀಡಿ, ಯಡಿಯೂರಪ್ಪನವರ ಕಾರ್ಯ ವೈಖರಿ ಹಾಗೂ ಕೈಗೊಳ್ಳುವ ತೀರ್ಮಾನಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು.
ಏಟಿಗೆ ಎದಿರೇಟು ಎಂಬಂತೆ ಕೋರ್ ಕಮಿಟಿಯಲ್ಲಿ ಯಡಿಯೂರಪ್ಪನವರ ಆಪ್ತ ನಾಯಕರುಗಳಿಗೆ ಕೋರ್ ಕಮಿಟಿಯಲ್ಲಿ ಜಾಗ ಸಿಗದಂತೆ ನೋಡಿಕೊಳ್ಳುವಲ್ಲಿ ಕೆಲ ನಾಯಕರು ಯಶಸ್ವಿಯಾಗಿ ಯಡಿಯೂರಪ್ಪನವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಂದ ಆಕ್ರೋಶಗೊಂಡಿದ್ದ ಯಡಿಯೂರಪ್ಪನವರು ಕೋರ್ ಕಮಿಟಿ ರಚನೆಯಾಗಿ ಎರಡು ತಿಂಗಳು ಕಳೆದಿದ್ದರೂ ಸಭೆಯನ್ನು ಕರೆದಿರಲಿಲ್ಲ. ಸಾಮಾನ್ಯವಾಗಿ ಕನಿಷ್ಠ ತಿಂಗಳಿಗೊಮ್ಮೆ ಕೋರ್ ಕಮಿಟಿ ಸಭೆ ನಡೆಸಲಾಗುತ್ತಿತ್ತು. ಈ ಸಭೆಯಲ್ಲೇ ಪಕ್ಷಕ್ಕೆ ಸಂಬಂಧಿಸಿದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು. ಯಡಿಯೂರಪ್ಪನವರು ಕೋರ್ ಕಮಿಟಿ ಸಭೆ ಕರೆಯದ ಬಗ್ಗೆಯೂ ವರಿಷ್ಠರಿಗೆ ಈಶ್ವರಪ್ಪ ದೂರು ನೀಡಿದ್ದರು. ಈ ಬೆಳವಣಿಗೆಗಳು ಪಕ್ಷದಲ್ಲಿ ಅಸಮಾಧಾನ, ಗೊಂದಲಗಳಿಗೆ ಕಾರಣವಾಗಿತ್ತು.
ಆದರೂ ಯಡಿಯೂರಪ್ಪನವರು ಯಾವುದಕ್ಕೂ ಸೊಪ್ಪು ಹಾಕದೆ ಪಕ್ಷದ ಸಂಘಟನೆಯನ್ನು ಬಲಪಡಿಸುವತ್ತ ಗಮನ ನೀಡಿ ಜಿಲ್ಲಾ ಪ್ರವಾಸಗಳನ್ನು ಕೈಗೊಂಡಿದ್ದರು.
ಪಕ್ಷದ ಅಧ್ಯಕ್ಷ ಯಡಿಯೂರಪ್ಪರವರನ್ನು ಮಣಿಸಲು ಅಹಿಂದ ಜಪಕ್ಕೆ ಮೊರೆ ಹೋದ ಈಶ್ವರಪ್ಪ, ಹಿಂದುಳಿದ ವರ್ಗದ ನಾಯಕನಾಗಿ ಬಿಂಬಿಸಿಕೊಳ್ಳಲು ಸಂಗೊಳ್ಳಿ ರಾಯಣ್ಣ, ಬ್ರಿಗೇಡ್ ರಚನೆ ಹಿಂದುಳಿದ ವರ್ಗದವರ ಸಮಾವೇಶಕ್ಕೂ ಮುಂದಾಗಿದ್ದರು. ಇದು ಪಕ್ಷದಲ್ಲಿ ಹಲವು ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಹೀಗೆ ಬಿಟ್ಟರೇ ಇದು ಸರಿಹೋಗಲ್ಲ ಎಂಬ ತೀರ್ಮಾನಕ್ಕೆ ಬಂದ ಯಡಿಯೂರಪ್ಪನವರು ಎಲ್ಲದ್ದಕ್ಕೂ ಕೊನೆ ಹಾಡಲು ಈ ತಿಂಗಳ 16 ರಂದು ಕೋರ್ ಕಮಿಟಿ ಸಭೆ ಕರೆಯುವ ತೀರ್ಮಾನ ಮಾಡಿದ್ದು, ಅದರಂತೆ ಪಕ್ಷದ ಕಛೇರಿಯಲ್ಲಿ ಈ ಸಭೆ ನಡೆಯಲಿದೆ.
ರಾಜ್ಯ ಬಿ.ಜೆ.ಪಿ.ಯಲ್ಲಿನ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಈ ಕೋರ್ ಕಮಿಟಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುವುದನ್ನು ತಳ್ಳಿ ಹಾಕಲಾಗದು.
Comments are closed.