ಬೆಂಗಳೂರು, ಆ. ೧೨- ಮುಂದಿನ ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ.
ಮುಂದಿನ ಮೇಯರ್ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಜೊತೆ ಹೊಸದಾಗಿ ಮೈತ್ರಿ ಮಾಡಿಕೊಳ್ಳಬೇಕೆ ಅಥವಾ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರೆಸಬೇಕೆ ಎಂಬ ಬಗ್ಗೆ ಇನ್ನು ಯಾವುದೇ ತೀರ್ಮಾನ ಆಗಿಲ್ಲ. ಕುಮಾರಸ್ವಾಮಿಯವರ ಜೊತೆ ಚರ್ಚೆ ನಡೆಸಿದ ನಂತರ ಅಂತಿಮ ತೀರ್ಮಾನ ಆಗಲಿದೆ ಎಂದರು.
ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಮೂರು ತಿಂಗಳಲ್ಲೇ ಸಂಬಂಧ ಹಳಸಿಹೋಗಿತ್ತು ಎಂದು ಅವರು ಹೇಳಿ, ಕಾಂಗ್ರೆಸ್ ಜೊತೆಗಿನ ಮೈತ್ರಿಯಲ್ಲಿ ಈಗ ಅಮಾನತ್ತಾಗಿರುವ ಜೆಡಿಎಸ್‌ನ ಮೂವರು ಶಾಸಕರು ಪ್ರಮುಖ ಪಾತ್ರ ವಹಿಸಿದ್ದರು. ಹಾಗಾಗಿ ಮುಂದಿನ ಮೇಯರ್ ಚುನಾವಣೆಯನ್ನು ಪಕ್ಷ ಸವಾಲಾಗಿ ಸ್ವೀಕರಿಸಲಿದೆ. ಚುನಾವಣಾ ಸಂದರ್ಭದಲ್ಲಿ ಜೆಡಿಎಸ್‌ನ ಎಲ್ಲಾ ಪಾಲಿಕೆ ಸದಸ್ಯರಿಗೆ ವಿಪ್ ಜಾರಿ ಮಾಡಲಾಗುವುದು ಎಂದರು.
ನವೆಂಬರ್‌ಗೆ ಹೊಸ ಕಚೇರಿ
ಬರುವ ನವೆಂಬರ್‌ನಲ್ಲಿ ಜೆಡ್ಎಸ್ ಪಕ್ಷದ ನೂತನ ಕಚೇರಿ ಉದ್ಘಾಟನೆಯಾಗಲಿದ್ದು, ಈ ಉದ್ಘಾಟನಾ ಸಮಾರಂಭಕ್ಕೆ ಜಯಪ್ರಕಾಶ್ ನಾರಾಯಣ್‌ರವರ ಆಂದೋಲನದಲ್ಲಿ ಪಾಲ್ಗೊಂಡಿದ್ದ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಸೇರಿದಂತೆ ಎಲ್ಲಾ ಹಿರಿಯ ನಾಯಕರನ್ನು ಆಹ್ವಾನಿಸುವುದಾಗಿ ದೇವೇಗೌಡರು ಹೇಳಿದರು.
Comments are closed.