ಕರ್ನಾಟಕ

ಕಟ್ಟಡಗಳ ಕಳೇಬರ ಸಂತ್ರಸ್ತರ ಹಣೆಬರ

Pinterest LinkedIn Tumblr

12Yelahanka1clrಬೆಂಗಳೂರು, ಆ.೧೨- ನಗರದಲ್ಲಿನ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ವಿರಾಮ ದೊರೆತಿದ್ದು, ಜೆಸಿಬಿಗಳ ಸದ್ದು ಮತ್ತು ಆರ್ಭಟ ಸದ್ಯಕ್ಕೆ ನಿಂತಿದೆ. ವರಮಹಾಲಕ್ಷ್ಮಿ ಹಬ್ಬ ಸೇರಿದಂತೆ ಸಾಲು ಸಾಲು ರಜೆಗಳಿರುವ ಕಾರಣ ಜೆಸಿಬಿಗಳಿಗೆ ಕೆಲಸ ಕೊಟ್ಟಿಲ್ಲ.

ಕಳೆದ ಒಂದು ವಾರದಿಂದ ನಡೆಯುತ್ತಿದ್ದ ತೆರವು ಕಾರ್ಯಾಚರಣೆ ಇಂದು ಎಲ್ಲೆಡೆ ಸ್ಥಗಿತಗೊಂಡಿದೆ. ಯಲಹಂಕ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರ ಸೇರಿದಂತೆ ಹಲವೆಡೆ ರಾಜಕಾಲುವೆಗಳ ಒತ್ತುವರಿ ತೆರವಿಗೆ ಸರ್ಕಾರ ಮುಂದಾಗಿದ್ದು, ದಶಕಗಳ ಹಿಂದೆ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದವರನ್ನು ತೆರವುಗೊಳಿಸಿ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ.

ಸ್ಥಳೀಯರ ಆಕ್ರೋಶ ಮತ್ತು ಹಿಡಿ ಶಾಪವನ್ನೂ ಲೆಕ್ಕಿಸದೆ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು. ತೆರವು ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿರುವ ಕಡೆಗಳಲ್ಲಿ ಕಟ್ಟಡದ ಅವಶೇಷಗಳು ಕಾಣಸಿಗುತ್ತವೆ.

ಮನೆ ಕಳೆದುಕೊಂಡು ಬೀದಿಗೆ ಬಂದ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಮುಂದೇನು ಎಂಬ ಚಿಂತೆಯಲ್ಲಿ ಜನರು ಪಾತ್ರೆ, ಪಗಡ, ಸಾಮಾನು, ಸರಂಜಾಮುಗಳೊಂದಿಗೆ ಬೀದಿಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯಲಹಂಕ ವ್ಯಾಪ್ತಿಯ ದೊಡ್ಡ ಬೊಮ್ಮಸಂದ್ರದಲ್ಲಿ ಅಧಿಕಾರಿಗಳ ಆದೇಶ ಪಾಲಿಸಿದ ಜೆಸಿಬಿಗಳ ಆರ್ಭಟಕ್ಕೆ ಕಟ್ಟಡಗಳು ತರೆಗೆಲೆಗಳಂತೆ ಉರುಳಿದ್ದು, ಈಗ ನೋಡಲು ಸಿಗುವುದು ಇಟ್ಟಿಗೆ ಅಡಿಯಲ್ಲಿ ಸಿಲುಕಿರುವ ಅವಶೇಷಗಳು ಮಾತ್ರ.

ಈ ಜಾಗದಲ್ಲಿದ್ದ ಅಂಗ‌ಡಿ-ಮುಂಗಟ್ಟುಗಳ ವ್ಯಾಪಾರಿಗಳು ಹಾಗೂ ವಾಸವಿದ್ದ ಕುಟುಂಬಗಳಿಗೆ ದಿಕ್ಕುತೋಚದಂತಾಗಿದ್ದು, ತುಂಬಿದ ಕಣ್ಣುಗಳಿಂದ ಸುರಿಯುವ ಕಣ್ಣೀರುಗಳನ್ನು ಒರೆಸಿಕೊಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ ತಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದಾರೆ.

ತೆರವು ಕಾರ್ಯಾಚರಣೆಯಲ್ಲಿ ಸುಮಾರು 35ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ಒಡೆಯಲಾಗಿದ್ದು, ಸುಮಾರು 5 ಕೋಟಿಗೂ ಹೆಚ್ಚು ಮೌಲ್ಯದ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸಲು ಬಿಬಿಎಂಪಿ ಖಾಸಗಿಯವರಿಗೆ ಟೆಂಡರ್ ನೀಡಿದ್ದು, ಕಂಬಿಗಳು ಹಾಗೂ ಇಟ್ಟಿಗೆಗಳನ್ನು ಬೇರ್ಪಡಿಸಿ ಬೆಳ್ಳಹಳ್ಳಿ ಕ್ವಾರೆಗೆ ಸಾಗಿಸುವ ಕಾರ್ಯ ಮುಂದುವರಿದಿದೆ.

ಸುಮಾರು 12 ವರ್ಷಗಳಿಂದ ಅಂಗಡಿ ಹಾಗೂ ಮನೆಯಲ್ಲಿ ವಾಸವಿದ್ದ ನಾರಾಯಣ್ ಲಾಲ್ ಮಾತನಾ‌ಡಿ, ಅಧಿಕಾರಿಗಳು ನಮಗೆ ತೆರವುಗೊಳಿಸಲು ಸಮಯವನ್ನೇ ನೀಡಲಿಲ್ಲ. ಏಕಾಏಕಿ ಬಂದು ಅಂಗಡಿ ಹಾಗೂ ಮನೆಯನ್ನು ಕೆಡವಿ ಹಾಕಿದ್ದಾರೆ. ಇದರಿಂದಾಗಿ ಸುಮಾರು 7 ಲಕ್ಷ ರೂ. ಮೌಲ್ಯದ ವಸ್ತುಗಳು ಮಣ್ಣು ಪಾಲಾಗಿವೆ. ವಸ್ತುಗಳನ್ನು ಸಾಗಿಸಲು ಜಾಗವಿಲ್ಲದೆ ರಾತ್ರಿಯೆಲ್ಲಾ ಕೂತು ಕಾವಲು ಕಾದು ಬೆಳಗ್ಗಿನಿಂದ ಅಳಿದುಳಿದ ಸಾಮಾನುಗಳನ್ನು ಸಾಗಿಸುತ್ತಿದ್ದೇವೆ ಎಂದು ಕಣ್ಣೀರಿಡುತ್ತಾರೆ.

ಗುರುತಿಸಿದ್ದ ಜಾಗಕ್ಕಿಂತ ಹೆಚ್ಚಿನ ಭಾಗವನ್ನು ನಮ್ಮ ಕಟ್ಟಡವನ್ನು ಒಡೆದು ಹಾಕಿದ್ದು, ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆ. ಪರಿಹಾರ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎನ್ನುತ್ತಾರೆ ಕಟ್ಟಡದ ಮಾಲೀಕ ಮುನಿಯಪ್ಪ.

30 ವರ್ಷಗಳಿಂದ ಹಾಸಿಗೆ ಅಂಗಡಿ ಇಟ್ಟುಕೊಂಡಿದ್ದು, ಮೊನ್ನೆ ಏಕಾಏಕಿ ಬಂದು ತೆರವುಗೊಳಿಸಲು ಮುಂದಾದ ಸಂದರ್ಭದಲ್ಲಿ ಅರ್ಧಗಂಟೆ ಕಾಲಾವಕಾಶ ಕೋರಿ ಶೇ.50ರಷ್ಟು ಸಾಮಾನುಗಳನ್ನು ಸಾಗಿಸಲು ನೆರವಾಯಿತು. ಆದರೂ ನಮಗೆ ಲಕ್ಷಾಂತರ ರೂ. ನಷ್ಟವಾಗಿದೆ ಎನ್ನುತ್ತಾರೆ ಅಲಿಬಾಬಾ ಬೆಡ್ಡಿಂಗ್ ಹೌಸ್‌ನ ಮಾಲೀಕರು. ಇನ್ನುಳಿದ ಭಾಗವನ್ನು ನವೀಕರಿಣಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಒಟ್ಟು ನಾಲ್ಕು ಬಾರಿ ಸರ್ವೆ ಕಾರ್ಯ ಮಾಡಿದ್ದು, ಬೇರೆ ಬೇರೆ ಜಾಗಗಳನ್ನು ಗುರುತಿಸಿ ಈಗ ಬದಲಿ ಜಾಗದಲ್ಲಿ ಕಾರ್ಯಾಚರಣೆ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲಿದ್ದ ಗ್ರಾಮದ ನಕ್ಷೆಯ ಮೇರೆಗೆ ರಾಜಕಾಲುವೆ ಗುರುತು ಹಾಕಲಾಗಿತ್ತು. ಆದರೆ ಮೊನ್ನೆ ಏಕಾಏಕಿ ಹೊಸದಾಗಿ ಗುರುತು ಮಾಡಿ ಕಟ್ಟಡಗಳನ್ನು ತೆರವುಗೊಲಿಸಿದ್ದಾರೆ. ಹಳೆಯ ನಕ್ಷೆಗಳಿಗೆ ಹೋಲಿಸಿದರೆ ಈಗ ಒಡೆದಿರುವ ಜಾಗದಲ್ಲಿ ರಾಜಕಾಲುವೆ ಇದೆ ಎನ್ನುವುದಕ್ಕೆ ದಾಖಲೆ ಇಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ಅಮಾಯಕರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.