ಬೆಂಗಳೂರು,ಆ.೯-೨೦೦೦ರಲ್ಲಿ ರಾಜ್ಯದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಮುಖ ಆರೋಪಿ ಶೇಖ್ ಅಮಿರ್ ಅಲಿ ಎಂಬಾತನನ್ನು ಸಿಐಡಿ ಅಧಿಕಾರಿಗಳು ಬರೋಬ್ಬರಿ ೧೬ ವರ್ಷಗಳ ಬಳಿಕ ಆಂಧ್ರಪ್ರದೇಶದ ನಲ್ಗೊಂಡದಲ್ಲಿ ಬಂಧಿಸಿದ್ದಾರೆ.
೨೦೦೦ನೇ ಇಸವಿಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ಹಲವೆಡೆ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಈ ಪ್ರಕರಣದ ಹಿಂದೆ ದೀನ್‌ದಾರ್ ಅಂಜುಮನ್ ಉಗ್ರ ಸಂಘಟನೆ ಕೈವಾಡವಿದೆಯೆಂದು ಶಂಕಿಸಲಾಗಿತ್ತು.
ಇದೀಗ ೧೬ ವರ್ಷಗಳ ಬಳಿಕ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಶೇಖ್ ಅಮಿರ್ ಅಲಿ ಸಿಐಡಿ ಮತ್ತು ಆಂಧ್ರಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಿದ್ದಾನೆ.
ಈತ ಜೆಜೆ ನಗರದ ಎಸ್.ಎಸ್.ಪೀಟರ್ ಮತ್ತು ಪೌಲ್ ಚರ್ಚ್ ಮೇಲೂ ದಾಳಿ ನಡೆಸಿದ್ದ. ಈ ಸಂಬಂಧ ಸಿಐಡಿ ಅಧಿಕಾರಿಗಳು ೨೯ ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಇವರಲ್ಲಿ ೧೧ ಮಂದಿಗೆ ಗಲ್ಲು ಶಿಕ್ಷೆಯಾಗಿದೆ.
ಶೇಖ್ ಅಮಿರ್ ಅಲಿ ವಿರುದ್ಧ ಸುಮಾರು ವರ್ಷಗಳ ಹಿಂದೆ ಬೆಂಗಳೂರಿನ ೧ನೇ ಎಸಿಎಂಸಿ ನ್ಯಾಯಾಲಯದಿಂದ ವಾರೆಂಟ್ ಜಾರಿ ಮಾಡಿ ಬಂಧನಕ್ಕೆ ಸೂಚಿಸಿತ್ತು. ಆದರೆ ಆರೋಪಿ ಪೊಲೀಸರ ಕೈಗೆ ಸಿಗದೆ ಇಷ್ಟು ವರ್ಷ ತಲೆ ಮರೆಸಿಕೊಂಡಿದ್ದ.
ಇದೀಗ ಸಿಕ್ಕಿಬಿದ್ದಿರುವ ಅಲಿಯನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಐವರು ಆರೋಪಿಗಳು ಪಾಕಿಸ್ತಾನದಲ್ಲಿರುವ ಬಗ್ಗೆ ಮಾಹಿತಿ ಇದ್ದು, ಶೀಘ್ರದಲ್ಲೇ ಅವರನ್ನೂ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.