ಕರ್ನಾಟಕ

ಮುಖ್ಯಮಂತ್ರಿ, ಗೃಹ ಸಚಿವರ ಪತ್ರವಿದ್ದರಷ್ಟೇ ಪೊಲೀಸ್‌ ವರ್ಗ

Pinterest LinkedIn Tumblr

Karnataka-Police--Symbolic-Image-600ಬೆಂಗಳೂರು: ವರ್ಷಕ್ಕೊಮ್ಮೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆಯಾದರೂ ಪೊಲೀಸ್‌ ಇಲಾಖೆಯಲ್ಲಿ ಮಾತ್ರ ಲಾಬಿ, ಒತ್ತಡಗಳಿಂದ ವರ್ಷಪೂರ್ತಿ ವರ್ಗಾವಣೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಇನ್ನು ಅದಕ್ಕೆ ಅವಕಾಶ ಇಲ್ಲ. ಹೌದು, ಪೊಲೀಸ್‌ ಇಲಾಖೆಯಲ್ಲಿ ಪ್ರಸಕ್ತ ಸಾಲಿನ ‘ಸಾಮಾನ್ಯ ವರ್ಗಾವಣೆ’ ಪ್ರಕ್ರಿಯೆ ಜುಲೈ 31ಕ್ಕೆ ಕೊನೆಗೊಂಡಿದೆ. ಇನ್ನುಮುಂದೆ ಅಂದರೆ ಮುಂದಿನ ಸಾಮಾನ್ಯ ವರ್ಗಾವಣೆವರೆಗೆ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಬೇಕಾದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಲಿಖೀತ ಶಿಫಾರಸು ಪತ್ರ ಸಲ್ಲಿಸುವುದು ಕಡ್ಡಾಯ. ಈ ಪತ್ರ ನೀಡಿದರೆ ಮಾತ್ರ ವರ್ಗಾವಣೆ ಅರ್ಜಿ ಪರಿಗಣಿಸಲು ಇಲಾಖೆ ನಿರ್ಧರಿಸಿದೆ. ಈ ಮೂಲಕ ವರ್ಷವಿಡೀ ನಡೆಯುವ ‘ವರ್ಗಾವಣೆ ಲಾಬಿ’ಗೆ ಇಲಾಖೆ ಬ್ರೇಕ್‌ ಹಾಕಿದ್ದು, ಈ ಹೊಸ ವರ್ಗಾವಣೆ ನೀತಿಯಲ್ಲಿ ಬದಲಾವಣೆ ಮಾಡದೇ ಇರುವ ಅಚಲ ನಿರ್ಧಾರಕ್ಕೂ ಬಂದಿದೆ.

ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ವರ್ಗಾವಣೆ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 200 ಇನ್ಸ್‌ಪೆಕ್ಟರ್‌, 50 ಎಸಿಪಿ/ಡಿವೈಎಸ್ಪಿ ಹಾಗೂ 300ಕ್ಕೂ ಅಧಿಕ ಸಬ್‌ ಇನ್ಸ್‌ಪೆಕ್ಟರ್‌ಗಳನ್ನು (ಐಜಿಪಿ ವಲಯ ಮಟ್ಟದ) ವರ್ಗಾವಣೆ ಮಾಡಲಾಗಿದೆ. ಬಹುತೇಕ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ. ಖಾಲಿ ಇರುವ ಬೆಂಗಳೂರು ವಿಜಯನಗರ ಉಪ ವಿಭಾಗ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಉಪ ವಿಭಾಗಕ್ಕೆ ಶೀಘ್ರದಲ್ಲೇ ಸಿಬಂದಿ ನೇಮಿಸಲಾಗುತ್ತದೆ. ಉಳಿದಂತೆ ಯಾವುದೇ ವರ್ಗಾವಣೆ ಇರುವುದಿಲ್ಲ ಎಂದು ರಾಜ್ಯ ಪೊಲೀಸ್‌ ಹೆಚ್ಚುವರಿ ಮಹಾನಿರ್ದೇಶಕ (ಆಡಳಿತ) ಪ್ರವೀಣ್‌ ಸೂದ್‌ ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಲಾಬಿಗೆ ಅವಕಾಶ ಇಲ್ಲ: ಪ್ರಸಕ್ತ ಸಾಲಿನಿಂದ ವರ್ಗಾವಣೆ ಹಾಗೂ ಮುಂಬಡ್ತಿ ಪ್ರಕ್ರಿಯೆಗೆ ‘ಯುಪಿಎಸ್‌ಸಿ’ ಸೂತ್ರ ಅಳವಡಿಸಿಕೊಂಡಿರುವ ಆಡಳಿತ ವಿಭಾಗದ ಎಡಿಜಿಪಿ ಪ್ರವೀಣ್‌ ಸೂದ್‌ ಅವರು, ರಾಜ್ಯ ಪೊಲೀಸ್‌ ಇಲಾಖೆಯಲ್ಲೂ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳಿಗೆ ಐಪಿಎಸ್‌ ಅಧಿಕಾರಿ ಗಳ ಮಾದರಿಯಲ್ಲೇ ‘ವರ್ಗಾವಣೆ ಮತ್ತು ಮುಂಬಡ್ತಿ ಭಾಗ್ಯ’ ಕಲ್ಪಿಸಲು ಮುಂದಾಗಿದ್ದಾರೆ. ಸಾಮಾನ್ಯ ವರ್ಗಾವಣೆಯನ್ನು ಸರಕಾರದ ಸೂಚನೆಯಂತೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರ ತಮಗೆ ಬೇಕಾದಾಗಲೆಲ್ಲಾ ವರ್ಷವಿಡಿ ರಾಜಕೀಯ ಲಾಬಿ ಮೂಲಕ ಹುದ್ದೆ ಬಯಸುವವರಿಗೆ ಬಿಸಿ ತಟ್ಟಿದೆ.

-ಉದಯವಾಣಿ

Comments are closed.