ನವದೆಹಲಿ: ಬಂಡವಾಳ ಹೂಡಿಕೆದಾರರ ಪಾಲಿಗೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇರುವ ಕರ್ನಾಟಕವೇ ಫೇವರಿಟ್. ಈ ಮೂಲಕ ದೇಶದಲ್ಲೇ ಹೂಡಿಕೆ ಆಕರ್ಷಣೆಯಲ್ಲಿ ಮುಂದಿದ್ದ ಗುಜರಾತ್ ಅನ್ನು ಕರ್ನಾಟಕ ಹಿಂದಿಕ್ಕಿದೆ. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿದ 2016ನೇ ಸಾಲಿನ “ಉದ್ಯಮ ಸುಧಾರಣಾ ಕ್ರಿಯಾ ಯೋಜನೆ’ ಸೂಚ್ಯಂಕದ ಪ್ರಕಾರ, 2016ರ ಜನವರಿಯಿಂದ-ಜೂನ್‌ವರೆಗಿನ ಅವಧಿಯಲ್ಲಿ ಗುಜರಾತ್ 21,309 ಕೋಟಿ ರೂ. ಬಂಡವಾಳ ಆಕರ್ಷಣೆ ಮಾಡಿದೆ. ಇದೇ ಅವಧಿಯಲ್ಲಿ ಕರ್ನಾಟಕ ಗುಜರಾತ್‌ಗಿಂತ ದುಪ್ಪಟ್ಟು ಅಂದರೆ 67,757 ಕೋಟಿ ರೂ. ಬಂಡವಾಳ ಆಕರ್ಷಿಸಿದೆ.
ಇನ್ನೂ ಒಂದು ಅಚ್ಚರಿಯ ಸಂಗತಿ ಎಂದರೆ 2015ರ ಇಡೀ ಅವಧಿಯಲ್ಲಿ ಗುಜರಾತ್ 64,733 ಕೋಟಿ ರೂ. ಬಂಡವಾಳ ಆಕರ್ಷಿಸಿದ್ದರೆ, ಅದನ್ನು ಈ ವರ್ಷ ಕರ್ನಾಟಕ ಕೇವಲ ಅರ್ಧ ತಿಂಗಳಲ್ಲಿ ಇದನ್ನು ಮೀರಿಸಿದೆ. ಈ ಮೂಲಕ ದೇಶದಲ್ಲೇ ಬಂಡವಾಳ ಆಕರ್ಷಣೆಯ ಅಗ್ರಸ್ಥಾನಿಯಾಗಿದೆ. ಹೂಡಿಕೆ ಸ್ನೇಹಿ ತಾಣಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.
ಗುಜರಾತ್ ಮೀರಿಸಿದ ಕರ್ನಾಟಕ: 2015ರ ಅವಧಿಯಲ್ಲಿ ದೇಶ 3.11 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಣೆ ಮಾಡಿದ್ದು, ಈ ವೇಳೆ ಗುಜರಾತ್ 64,733 ಕೋಟಿ ರೂ. ಮಾಡಿತ್ತು. ಅರ್ಥಾತ್ ದೇಶದ ಪಾಲಿನಲ್ಲಿ ಶೇ.20.81ರಷ್ಟು ಆಗಿತ್ತು. ಆದರೆ 2016-17ನೇ ಅವಧಿಯ ಜನವರಿಯಿಂದ ಜೂನ್‌ವರೆಗಿನಲ್ಲಿ 21,309 ಕೋಟಿ ರೂ. ಬಂಡವಾಳ ಗುಜರಾತ್ ಆಕರ್ಷಿಸಿದೆ. ಅಂದರೆ ಆ ರಾಜ್ಯದ ಪಾಲಿನ ಪ್ರಮಾಣ ಶೇ.12.06ರಷ್ಟು ಇಳಿಕೆಯಾಗಿದೆ. ಇದೇ ವಳೆ ಕರ್ನಾಟಕದ ಪಾಲು 2015ರಲ್ಲಿ 31,668 ಕೋಟಿ ರೂ. ಆಗಿದ್ದು, 2016ರ ಜನವರಿಯಿಂದ ಜೂನ್ ಅವಧಿಯಲ್ಲಿ (67,757 ಕೋಟಿ ರೂ.) ಶೇ.30.34ರಷ್ಟಕ್ಕೇರಿದೆ. ಬಂಡವಾಳ ಆಕರ್ಷಣೆಯಲ್ಲಿ ಶೇ.19.18ರಷ್ಟು ಬೆಳವಣಿಗೆಕಾಯ್ದುಕೊಂಡಿದೆ.
ಕಳೆದ ಫೆಬ್ರವರಿಯಲ್ಲಿ ನಡೆದ “ಇನ್ವೆಸ್ಟ್ ಕರ್ನಾಟಕ’ ಬಂಡವಾಳ ಹೂಡಿಕೆದಾರರ ಸಮಾವೇಶದ ಮೂಲಕ 1,201 ಉದ್ಯಮ ಸ್ಥಾಪನೆಗೆ ಕಂಪನಿಗಳು ಮುಂದೆ ಬಂದಿದ್ದು, 3.08 ಲಕ್ಷ ಕೋಟಿ ರೂ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದವು. ಉಳಿದಂತೆ ಅತ್ಯಧಿಕ ಬಂಡವಾಳ ಆಕರ್ಷಿಸಿದ ಪಟ್ಟಿಯಲ್ಲಿ ಮಹಾರಾಷ್ಟ್ರ (15,688 ಕೋಟಿ ರೂ.), ತೆಲಂಗಾಣ (13,600 ಕೋಟಿ ರೂ.), ಛತ್ತೀಸ್‌ಗಢ (8,514 ಕೋಟಿ ರೂ.) ಇವೆ.
Comments are closed.