ಕರ್ನಾಟಕ

ಹಣ ಇದ್ದರೆ ಏನೆಲ್ಲ ಕೊಳ್ಳಬಹುದು ಎಂಬ ಆಲೋಚನೆಯಿಂದ ಬೆಳ್ಳಿಪರದೆಯ ಬೆನ್ನು ಹತ್ತಿದೆ: ನಟಿ ಲಕ್ಷ್ಮೀ ಮನದಾಳದ ಮಾತು

Pinterest LinkedIn Tumblr

lakshmi

ಬೆಂಗಳೂರು: ಯಾವುದೇ ಮಹದಾಸೆಯಿಂದ ಸಿನಿಮಾ ಕ್ಷೇತ್ರಕ್ಕೆ ಬರಲಿಲ್ಲ. ಆಗ ನನ್ನ ತಲೆಯಲ್ಲಿ ಇದ್ದ ಒಂದೇ ವಿಚಾರ ಎಂದರೆ ಹಣ. ದುಡ್ಡು ಇದ್ದರೆ ಏನೆಲ್ಲ ಕೊಳ್ಳಬಹುದು ಎಂಬ ಆಲೋಚನೆಯಿಂದ ಬೆಳ್ಳಿಪರದೆಯ ಬೆನ್ನು ಹತ್ತಿದೆ’ ಎಂದು ನಟಿ ಲಕ್ಷ್ಮೀ ಸಿನಿಮಾ ಜಗತ್ತಿನ ಕಾಲಿಟ್ಟ ಗಳಿಗೆಯನ್ನು ನೆನೆದರು.

ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಹಿರಿಯ ನಟಿ ಲಕ್ಷ್ಮೀ ಅವರು ತಮ್ಮ ಜೀವನದ ಅಚ್ಚಳಿಯದ ಘಟನೆಗಳ ಬಗ್ಗೆ ಅಭಿಮಾನಗಳೊಂದಿಗೆ ಮೆಲುಕು ಹಾಕಿದರು.

‘ಸಿನಿಮಾ ಎನ್ನುವ ಆಕರ್ಷಣೆಯ ಹಿಂದೆ ಬಿದ್ದವಳಲ್ಲಿ ನಾನೂ ಒಬ್ಬಳು. ಕನ್ನಡದ ಮೊದಲ ಸಿನಿಮಾ ‘ಗೋವಾದಲ್ಲಿ ಸಿಐಡಿ 999’ಗೆ ₹ 2,500 ಸಂಭಾವನೆ ಕೇಳಿದ್ದೆ. ಆಗೆಲ್ಲ ವಜ್ರದ ಓಲೆಗಳ ಬೆಲೆ ₹ 3,000 ಇತ್ತು. ಎರಡು ಸಿನಿಮಾದಿಂದ ಬಂದ ಹಣದಲ್ಲಿ ವಾಚ್‌, ಒಡವೆ ತೆಗೆದುಕೊಳ್ಳುವ ಮನಸ್ಸಿನಿಂದ ಸಿನಿಮಾದ ಕಡೆ ನಡೆದೆ. 16ನೇ ವಯಸ್ಸಿನಲ್ಲಿ ಮೂಡುವ ಸಾಮಾನ್ಯ ಆಸೆ ಆದಾಗಿದ್ದವು’ ಎಂದು ಲಕ್ಷ್ಮೀ ಅವರು ವಿವರಿಸಿದರು.|

‘ನಟನಾ ಕಲೆ ಎಲ್ಲರಲ್ಲೂ ಗುಪ್ತವಾಗಿರುತ್ತದೆ. ಯಾರಿಗೆ ಯಾವುದು ಹೆಚ್ಚು ಆಪ್ತವೆನಿಸುತ್ತದೆಯೋ ಅದು ಅವರ ಕೈ ಹಿಡಿಯುತ್ತದೆ. ನನಗೆ ನಟನೆ ಕೈ ಹಿಡಿಯಿತು. ಅದರಲ್ಲೇ ನನ್ನ ಜೀವನ ಇದೆ. ಆದರೆ ಯಾವುದೇ ಕೆಲಸ ಇರಲಿ ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಖಂಡಿತ. ಒಬ್ಬ ಕಲಾವಿದ ಬೆಳೆಯಲು ನಿರ್ದೇಶಕರು ಮುಖ್ಯ ಕಾರಣರಾಗುತ್ತಾರೆ. ಅಂತಹ ನಿರ್ದೇಶಕರು ಸಿಕ್ಕಿದ್ದರಿಂದ ಕನ್ನಡದಲ್ಲಿ 54 ಯಶಸ್ವಿ ಸಿನಿಮಾಗಳನ್ನು ಮಾಡಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

‘ಬಾಲಿವುಡ್‌ನನಗೆ ಅಷ್ಟು ಆಪ್ತವೆನಿಸಲಿಲ್ಲ. ಹಾಗಾಗಿ ಅಲ್ಲಿ ಉಳಿಯಲು ಮನಸಾಗಲಿಲ್ಲ. ದಕ್ಷಿಣದಲ್ಲೇ ನನಗೆ ಹೆಚ್ಚು ಉಲ್ಲಾಸ ದೊರೆತದ್ದರಿಂದ ಇಲ್ಲೇ ನೆಲೆಯೂರಿದೆ. ತಮಿಳು ನನ್ನ ತಾಯಿ ಭಾಷೆ, ತೆಲುಗು ನನ್ನ ತಂದೆ ಭಾಷೆ, ಕನ್ನಡ ನನಗೆ ಅನ್ನ ಕೊಟ್ಟ ಭಾಷೆ ಈ ಮೂರನ್ನು ತೊರೆದು ಲಕ್ಷ್ಮೀ ಇರಲು ಸಾಧ್ಯವಿಲ್ಲ’ ಎಂದರು.

‘ಅಮ್ಮ ನನ್ನ ಎಲ್ಲಾ ಸಿನಿಮಾಗಳನ್ನು ಹೊಗಳುತ್ತಿದ್ದರು. ತಾಯಿಯ ಮನಸ್ಸು ಎಂದೂ ವಿಮರ್ಶೆ ಮಾಡುವುದಿಲ್ಲ. ನಾವೆಲ್ಲರೂ ತಾಯಿಯ ಮನಸ್ಸನ್ನು ಬಹಳಷ್ಟು ಬಾರಿ ನೋಯಿಸಿರುತ್ತೇವೆ. ಅವರನ್ನು ಒಮ್ಮೆ ತಬ್ಬಿಕೊಂಡು ಕ್ಷಮೆ ಕೇಳಿದರೆ, ಆ ತಾಯಿ ಮನಸ್ಸು ಮುದಗೊಳ್ಳುತ್ತದೆ. ನನ್ನ ತಾಯಿಯ ಅಂತ್ಯಕ್ರಿಯೆ ಸಂದರ್ಭದಲ್ಲಿ ನಾನೂ ಕ್ಷಮೆ ಕೇಳಿದೆ’ ಎಂದು ಭಾವುಕರಾದರು.

‘ಈಗಿನ ಕಲಾವಿದರು ಸಲಹೆಗಳನ್ನು ತೆಗದುಕೊಳ್ಳುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಶ್ರಮ ಪಡುತ್ತಿಲ್ಲ ಎಂದಲ್ಲ. ಎಲ್ಲರೂ ಶ್ರಮಿಸುತ್ತಾರೆ. ಶ್ರದ್ಧೆಯಿಂದ ಕೆಲಸಗಳನ್ನು ನಿರ್ವಹಿಸುತ್ತಾರೆ. ಎಡವಿ ಬಿದ್ದಾಗ ಅವರಿಗೇ ತಿಳಿಯುತ್ತದೆ ಮತ್ತು ಆ ತಿಳಿವಳಿಕೆ ಅವರನ್ನು ಶಾಶ್ವತವಾಗಿ ಎಚ್ಚರವಾಗಿಡುತ್ತದೆ. ಹಾಗಾಗಿ ಯಾರಿಗೂ ಕಿವಿಮಾತು ಹೇಳಲು ಹೋಗುವುದಿಲ್ಲ’ ಎಂದು ಖಡಕ್‌ಆಗಿ ನುಡಿದರು.

ಪತ್ರಕರ್ತ ಸದಾಶಿವ ಶೆಣೈ ಮತ್ತು ಸಾಹಿತಿ ಜೋಗಿ ಅವರು ಲಕ್ಷ್ಮೀ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು, ನಿರ್ದೇಶಕ ದೊರೆ ಭಗವಾನ್‌, ನಟ ಜೈ ಜಗದೀಶ್, ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್‌, ವಾರ್ತಾ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶು ಕುಮಾರ್‌, ಗಾಂಧಿ ಭವನ ಅಧ್ಯಕ್ಷ ಶ್ರೀನಿವಾಸಯ್ಯ, ಹಿರಿಯ ನಟಿ ಪ್ರತಿಮಾ ದೇವಿ, ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್‌ ಹಾಜರಿದ್ದರು.

Comments are closed.