ಕರ್ನಾಟಕ

ಅಸಮರ್ಪಕ ತ್ಯಾಜ್ಯ ನಿರ್ವಹಣೆ 2೦೦ ಸ್ಥಳಗಳ ಪತ್ತೆ

Pinterest LinkedIn Tumblr

14j9-city-marketclrಬೆಂಗಳೂರು,ಆ.೪-ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬೆಂಗಳೂರು ಮಹಾನಗರದಲ್ಲಿ ಒಣ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ೨೦೦ ಸ್ಥಳಗಳನ್ನು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮೂರೇ ದಿನಗಳಲ್ಲಿ ಪತ್ತೆ ಹಚ್ಚಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ನಗರದ ೧೯೮ ವಾರ್ಡ್‌ಗಳಲ್ಲಿ ೮ ತಂಡಗಳನ್ನು ರಚನೆ ಮಾಡಿತ್ತು,ಆ ತಂಡಗಳು ಆ.೧ರಿಂದ ಕೆಲಸ ಆರಂಭಿಸಿದ್ದು ಆ.೬ರ ವರೆಗೂ ತನ್ನ ಕಾರ್ಯ ನಿರ್ವಹಿಸುತ್ತಿವೆ. ಈ ನಡುವೆಯೇ ಮಂಡಳಿ ಮೂರು ದಿನಗಳಲ್ಲಿ ಸಮರ್ಪಕವಾಗಿ ಕಸ ನಿರ್ವಹಣೆ ಮಾಡದ ೨೦೦ ಸ್ಥಳಗಳನ್ನು ಗುರುತು ಮಾಡಿದೆ.

ಅದರಲ್ಲಿ ಕೆರೆಗಳನ್ನೂ ಶುದ್ಧೀಕರಿಸದಿರುವುದು ಸೇರಿಕೊಂಡಿದೆ.ಮಂಡಳಿಯೂ ಗುರುತಿಸಿರುವ ಪ್ರಕಾರ ಬೆಂಗಳೂರು ಪೂರ್ವದಲ್ಲಿ ಅತಿ ಹೆಚ್ಚು ಕಸದ ಸಮಸ್ಯೆ ತಲೆದೋರಿದೆ.ಅಲ್ಲಿ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ.ಈ ಭಾಗದ ೬ ವಾರ್ಡ್‌ಗಳಲ್ಲಿ ೨೧ ಪ್ರಮುಖ ಸ್ಥಳಗಳನ್ನು ಗುರುತಿಸಿದೆ.

ಬಾಣಸವಾಡಿಯಲ್ಲಿ ಒಣ ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ.ಹಸುಗಳು ಅದನ್ನೇ ತಿನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇಲ್ಲಿ ಕಳೆದ ಎರಡು ವರ್ಷಗಳಿಂದ ಕಸದ ಸಮಸ್ಯೆ ಇದೆ. ಈ ಭಾಗದ ಜನರು ಕಸವನ್ನು ಎಸೆಯುತ್ತಿದ್ದರೂ ಸಮರ್ಪಕವಾದ ಬೇಲಿ ಹಾಕುವಲ್ಲಿಯೂ ಮಹಾನಗರ ಪಾಲಿಕೆ ನಿರ್ಲಕ್ಷ ವಹಿಸಿದೆ.

ಕಸವನ್ನು ವಿಂಗಡಿಸುವ ಕೆಲಸವನ್ನು ಸಮರ್ಪಕವಾಗಿ ಮಾಡದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.ಬೆಳಿಗ್ಗೆ ೬.೩೦ ರಿಂದ ೯.ರ ವೇಳೆಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ.ಆದರೆ ಆ ಸಮಯದಲ್ಲಿ ಬಹುತೇಕ ನಿವಾಸಿಗಳು ಮನೆಯಿಂದ ಹೊರಗಡೆ ಇರುವುದರಿಂದ ಪೌರಕಾರ್ಮಿಕರು ಕಸ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.ಮನೆ ಮುಂದೆ ಬರುವ ವಾಹನವೂ ಎರಡು ನಿಮಿಷಕ್ಕೆ ಹೆಚ್ಚಿನ ಸಮಯ ನಿಲ್ಲುವುದಿಲ್ಲ.ಹೀಗಾಗಿ ನಿವಾಸಿಗಳು ರಸ್ತೆ ಬದಿ, ಚರಂಡಿ,ಕೆರೆಗಳ ಬಳಿ ಕಸ ಎಸೆಯುತ್ತಾರೆ ಇದರಿಂದಾಗಿ ಸಮಸ್ಯೆ ಎದುರಾಗಿದೆ ಎಂದು ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಗುರುತು ಮಾಡಿರುವ ೨೦೦ ಸ್ಥಳಗಳಲ್ಲಿನ ಕಸವನ್ನು ತೆರವು ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಹಾನಗರ ಪಾಳಿಕೆಗೆ ಸೂಚಿಸಿದ್ದಾರೆ.

Comments are closed.