ನವಲಗುಂದ/ನರಗುಂದ, ಆ. ೪ – ನವಲಗುಂದ ಹಾಗೂ ನರಗುಂದ ಎರಡು ಪಟ್ಟಣಗಳು ಅಕ್ಷರಶಃ ಪೊಲೀಸರ ವಶವಾಗಿವೆ.
ಈಚೆಗೆ ನಡೆದ ಮಹದಾಯಿ ಹೋರಾಟದಲ್ಲಿ ನವಲಗುಂದ, ನರಗುಂದ, ಯಮನೂರಿನಲ್ಲಿ ನಡೆದ ಅಮಾಯಕರ ಮೇಲಿನ ಖಾಕಿ ದರ್ಪದ ಪ್ರಕರಣ ರಾಜ್ಯದ ಜನಮಾನಸದಿಂದ ಮಾಸುವ ಮೊದಲೆ ಮತ್ತೆ 2 ಪಟ್ಟಣಗಳಲ್ಲಿ ನೂರಾರು ಸಂಖ್ಯೆಯ ಪೊಲೀಸರು ಇಂದು ಬೀಡು ಬಿಟ್ಟಿದ್ದಾರೆ.
ಪೊಲೀಸರ ದೌರ್ಜನ್ಯ ಖಂಡಿಸಿ, ಬಂಧಿತ ರೈತರ ಬಿಡುಗಡೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಬೃಹತ್ ಸಮಾವೇಶ ನಡೆಯಿತು.
ನವಲಗುಂದದ ರೈತ ಭವನದಲ್ಲಿ ಜರುಗಿದ ಈ ಸಮಾವೇಶದಲ್ಲಿ ಕಂಡು ಬಂದದ್ದು ಕೇವಲ 100 ರಷ್ಟು ರೈತರು ಆದರೆ, ಪಟ್ಟಣದಲ್ಲಿ 2500 ಪೊಲೀಸ ಸಿಬ್ಬಂದಿ, 3 ಜನ ಎಸ್ಪಿ,12 ಡಿ.ವಾಯ್.ಎಸ್ಪಿ, ಅರೆಸೇನಾಪಡೆ ತುಕಡಿ, ಸಿ.ಪಿ.ಐಗಳುಬೀಡು ಬಿಟ್ಟು ಇಡಿ ಪಟ್ಟಣ ಪೊಲೀಸರ ವಶವಾದದ್ದು ಎದ್ದು ಕಾಣುತ್ತಿತ್ತು. ಅಲ್ಲದೇ ನಾಲ್ಕು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೇ ಘಟನಾವಳಿಗಳನ್ನು ಸೆರೆ ಹಿಡಿಯಲು ಆಕಾಶದಲ್ಲಿ ಡ್ರೋಣ ಹಾರಿ ಬಿಡಲಾಗಿದೆ.
ಪ್ರತಿಭಟನಾಕಾರರ ಸಂಖ್ಯೆಗಿಂತಲೂ ಪೊಲೀಸರ ಸಂಖ್ಯೆಯೂ ಅಧಿಕವಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.
ಕಟ್ಟೆಚ್ಚರದ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯ ಪೊಲೀಸ ಬಲ ಹೇರಿ ಹೋರಾಟ ಹತ್ತಿಕ್ಕುವ ಹುನ್ನಾರ ಇದಾಗಿದೆ ಎಂಬುದು ಹಲವು ರೈತ ಮುಖಂಡರ ಆರೋಪವಾಗಿದೆ.ಏಕೆಂದರೆ ಖಾಕಿ ದರ್ಪ ಪ್ರಕರಣ ಎಲ್ಲೆಡೆ ಕೋಲಾಹಲ ಎಬ್ಬಿಸಿ ವಿರೋಧ ವ್ಯಕ್ತವಾದ ಕೂಡಲೇ ನರಗುಂದ, ನವಲಗುಂದ, ಯಮನೂರಿನಿಂದ ಪೊಲೀಸರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವದೆಂದು ರಾಜ್ಯ ಗೃಹ ಇಲಾಖೆ ಮೂಲಗಳು ಹೇಳಿಕೆ ನೀಡಿದ್ದವು.
ಆದರೆ ಕೇವಲ 100 ರೈತರು ಪಾಲ್ಗೊಂಡಿರುವ ಒಂದು ಸಮಾವೇಶಕ್ಕೆ ಈ ಅಪಾರ ಪ್ರಮಾಣದ ಪೊಲೀಸರನ್ನು ನಿಯೋಜನ ಗೊಳಿಸಿರುವುದೇಕೆ? ಎಂಬುದು ನರಗುಂದ, ನವಲಗುಂದ ರೈತರ ಪ್ರಶ್ನೆಯಾಗಿದೆ.
ನವಲಗುಂದ, ನರಗುಂದದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಜನಜೀವನ ಎಂದಿನ ರೀತಿಯಲ್ಲಿ ಇದ್ದರೂ ಖಾಕಿ ಪಡೆಯೇ ಎಲ್ಲೆಂದರಲ್ಲಿ ಕಂಡು ಬರುತ್ತಿದೆ.
ನವಲಗುಂದದಲ್ಲಿ ನಡೆದ ರೈತ ಸಮಾವೇಶದಲ್ಲಿ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ, ಶಾಸಕ ಪುಟ್ಟಣ್ಣಯ್ಯ, ಚಾಮರಸ ಪಾಟೀಲ ಮತ್ತಿತರರು ಪಾಲ್ಗೊಂಡು ಆದಷ್ಟು ಬೇಗ ರೈತರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
Comments are closed.