ಬೆಂಗಳೂರು, ಜು. ೨೭- ವೇತನ ಏರಿಕೆ ಬಗ್ಗೆ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವೆ `ಚೌಕಾಸಿ’ ನಡೆದಿದೆ. ಶೇ. 35 ರಷ್ಟು ವೇತನ ಹೆಚ್ಚಿಸುವಂತೆ ಹಿಡಿದಿದ್ದ ಬಿಗಿ ಪಟ್ಟನ್ನು ಸಾರಿಗೆ ನೌಕರರು ಸಡಿಲಿಸಿದ್ದು, ಶೇ. 18ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರದ ಮುಂದೆ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.
ಈ ಬೇಡಿಕೆಯನ್ನು ಸರ್ಕಾರ ಒಪ್ಪಿದರೆ ಇಂದೇ ಮುಷ್ಕರವನ್ನು ವಾಪಸ್ ಪಡೆಯುವುದಾಗಿ ಕಾರ್ಮಿಕ ಸಂಘಟನೆಗಳು ಹೇಳಿವೆ.
ಈ ಹೊಸ ಬೇಡಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡಿ ಅವರು ತಿಳಿಸಿದ್ದಾರೆ.
ಶಾಂತಿನಗರದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೌಕರರ ಮುಷ್ಕರ ವಾಪಸಾತಿ ಸಂಬಂಧ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರ ಮುಖಂಡರುಗಳು ಶೇ. 35ರಷ್ಟು ವೇತನ ಏರಿಕೆ ಬೇಡಿಕೆಯನ್ನು ಕೈಬಿಟ್ಟಿದ್ದೇವೆ, ಶೇ. 18ರಷ್ಟು ವೇತನ ಏರಿಸಿ ನಾವು ಮುಷ್ಕರ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದಾದ ನಂತರ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಮತ್ತೆ ನಿಮ್ಮನ್ನು ಸಂಜೆ ಸಭೆ ಕರೆಯುತ್ತೇನೆ ಎಂದು ಹೇಳಿ ಇಂದಿನ ಸಮಾಲೋಚನಾ ಸಭೆಯನ್ನು ಮುಗಿಸಿದರು.
ಶೇ. 18ರಷ್ಟು ವೇತನ ಏರಿಸಬೇಕು
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಂಸ್ಥೆಯ ಕಾರ್ಮಿಕ ಸಂಘಟನೆಯ ಮುಖ್ಯಸ್ಥ ಹೆಚ್.ವಿ ಅನಂತಸುಬ್ಬರಾವ್ ಅವರು ಇಂದಿನ ಸಭೆಯಲ್ಲಿ ಶೇ. 18ರಷ್ಟು ವೇತನ ಏರಿಕೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದೇವೆ, ಸರ್ಕಾರ ಇದನ್ನು ಒಪ್ಪಿದರೆ ಮುಷ್ಕರ ವಾಪಸ್ ಪಡೆಯುತ್ತೇವೆ, ಅಂತಿಮವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಪ್ರಕಟಿಸುವುದಾಗಿ ಸಾರಿಗೆ ಸಚಿವರು ಹೇಳಿದ್ದಾರೆ. ಮುಖ್ಯಮಂತ್ರಿಗಳ ತೀರ್ಮಾನವನ್ನು ನೋಡಿಕೊಂಡು ಮುಷ್ಕರ ವಾಪಸ್ ಪಡೆಯುವ ಬಗ್ಗೆ ನಿರ್ಧರಿಸುತ್ತೇವೆ ಎಂದರು.
ಸರ್ಕಾರ ಶೇ. 10ರಷ್ಟು ವೇತನ ಏರಿಕೆಯ ಬೇಡಿಕೆಗೆ ಅಂಟಿಕೊಂಡಿದೆ. ಸರ್ಕಾರ ಸ್ವಲ್ಪ ವೇತನ ಏರಿಕೆಗೆ ಮನಸ್ಸು ಮಾಡಿದರೆ ನೌಕರರು ಮುಷ್ಕರ ನಿಲ್ಲಿಸುತ್ತಾರೆ. ಶೇ. 10ರಷ್ಟು ವೇತನ ಏರಿಕೆಗೆ ಒಪ್ಪಿಕೊಂಡರೆ ಮುಷ್ಕರ ನಡೆಸಿ ಏನು ಪ್ರಯೋಜನ ಹಾಗಾಗಿ, ಸರ್ಕಾರ ಸಾರಿಗೆ ಸಂಸ್ಥೆ ಶೇ. 10ಕ್ಕಿಂತ ಹೆಚ್ಚು ವೇತನ ಏರಿಕೆಗೆ ತೀರ್ಮಾನಕೈಗೊಳ್ಳಬೇಕು ಎಂದು ಹೇಳಿದರು.
ನೌಕರರ ಈ ಹೊಸ ಬೇಡಿಕೆ ಈಡೇರಿದರೆ ಬಸ್‌ಗಳ ಸಚಾರ ಸಂಜೆಯಿಂದಲೇ ಆರಂಭವಾಗಲಿದೆ.
ಇಂದು ನಡೆದ ಈ ಸಂಧಾನ ಸಭೆಯಲ್ಲಿ ಸಾರಿಗೆ ಸಂಸ್ಥೆಯ ಎಂ.ಡಿ ರಾಜೇಂದ್ರ ಕಟಾರಿಯಾ, ಬಿಎಂಟಿಸಿ ಎಂ.ಡಿ ಏಕರೂಪ್ ಕೌರ್, ಬಿಎಂಟಿಸಿ ಉಪಾಧ್ಯಕ್ಷ ಆರಾಧ್ಯ, ಕಾರ್ಮಿಕ ಮುಖಂಡರಾದ ಪ್ರೊ. ಕೆ.ಎಸ್ ಶರ್ಮ, ಅರಸು ಇವರುಗಳು ಪಾಲ್ಗೊಂಡಿದ್ದರು.
Comments are closed.