(mng) ಬೆಂಗಳೂರು,26: ಸಾರ್ವಜನಿಕರ ಅನುಕೂಲಕ್ಕಾಗಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನ್ನ ಅಧಿಕೃತ ವೆಬ್ ಸೈಟ್ ಹಾಗೂ ಫೇಸ್ ಬುಕ್ ಪುಟವನ್ನು ಸೋಮವಾರದಿಂದ ಆರಂಭಿಸಿದೆ.
ಬೆಂಗಳೂರಿನದ ರೇಸ್ಕೋರ್ಸ್ ರಸ್ತೆಯಲ್ಲಿರುವ ಎಸಿಬಿ ಪ್ರಧಾನ ಕಚೇರಿಯಲ್ಲಿ ಎಸಿಬಿ ಮುಖ್ಯಸ್ಥ ಎಡಿಜಿಪಿ ಕೆ.ವಿ. ಗಗನ್ದೀಪ್ ಅವರು ವೆಬ್ಸೈಟ್ (acb.karnataka.gov.in) ಹಾಗೂ ಫೇಸ್ಬುಕ್ ಖಾತೆಗೆ ಚಾಲನೆ ನೀಡಿದರು. ಐಜಿಪಿ ಡಾ. ಎಂ.ಎ. ಸಲೀಂ ಹಾಗೂ ಡಿಸಿಪಿ ಲಾಬೂರಾಮ್ ಭಾಗವಹಿಸಿದ್ದರು.
ಎಸಿಬಿ ಪರಿಚಯ, ಉದ್ದೇಶ, ಸಂಘಟನೆ ಬಗೆಗಿನ ಮಾಹಿತಿಗಳು, ಜಿಲ್ಲಾ ಎಸಿಬಿ ಅಧಿಕಾರಿ ಮತ್ತು ಕಚೇರಿಗಳ ಸಂಪರ್ಕ ವಿವರಗಳು, ಭ್ರಷ್ಟಾಚಾರದ ವಿರುದ್ಧ ದೂರು ದಾಖಲಿಸುವ ಬಗ್ಗೆ ಮಾಹಿತಿ ಹಾಗೂ ಪದೇಪದೆ ಕೇಳಬಹುದಾದ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಹಾಕಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತದ ಅಧಿಕಾರವನ್ನು ಸಹ ಯಾವುದೇ ರೀತಿಯಿಂದ ಮೊಟಕುಗೊಳಿಸಿದ ಹಾಗೆ ಆಗುವುದಿಲ್ಲ. ಬದಲಿಗೆ ಲೋಕಾಯುಕ್ತದ ಕೆಲಸವು ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ಸಾಗುತ್ತದೆ. ಭ್ರಷ್ಟಾಚಾರ ಅಧಿನಿಯಮದಡಿ ಲೋಕಾಯುಕ್ತರಿಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಅವರೇ ತನಿಖೆಗಳ ಮೇಲ್ವಿಚಾರಣೆ ನಡೆಸುತ್ತಾರೆ.
ಸುಪ್ರೀಂ ಕೋರ್ಟು ಮತ್ತು ಹೈಕೋರ್ಟುಗಳ ಹಲವು ತೀರ್ಪುಗಳಲ್ಲಿ ನ್ಯಾಯಾಲಯಗಳು ನೀಡಿರುವ ಆದೇಶಗಳ ನಿರ್ದೇಶನಗಳಿಗೆ ಅನುಗುಣವಾಗಿಯೇ ಭ್ರಷ್ಟಾಚಾರ ನಿಗ್ರಹ ದಳ- ACB ಯನ್ನು ಅಧಿಸೂಚನೆಯ ಮೂಲಕ ಸೃಷ್ಟಿಸಲಾಗಿದೆ. ಪ್ರತಿಯೊಂದು ಇಲಾಖೆ/ನಿಗಮ/ಮಂಡಳಿಗಳಲ್ಲಿ ಜಾಗೃತ ಕೋಶಗಳನ್ನು ಸೃಷ್ಟಿಸಲಾಗಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಯ ಸಮಗ್ರ ಸುಧಾರಣೆ ಅಂಗವಾಗಿ ಇವುಗಳನ್ನು ಸೃಜಿಸಲಾಗಿದೆ. ಕೇಂದ್ರ ಸರ್ಕಾರದ ಕೇಂದ್ರ ಜಾಗೃತ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಗೃತ ಕೋಶಗಳ ಮಾದರಿಯಲ್ಲಿಯೇ ಇವನ್ನು ಸೃಷ್ಠೀಸಲಾಗಿದೆ. ಈ ಕೋಶಗಳು ಪ್ರತಿ ಇಲಾಖೆ/ನಿಗಮ/ಮಂಡಳಿಗಳಲ್ಲಿನ ಸಾರ್ವಜನಿಕ ನೌಕರರ ವಿರುದ್ಧದ ದೂರುಗಳು/ಆರೋಪಗಳು/ಕುಂದುಕೊರತೆಗಳನ್ನು ಪರಿಶೀಲಿಸಿ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ವರದಿ ಮಾಡುತ್ತವೆ.
Comments are closed.