ಕರ್ನಾಟಕ

ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆ: 130 ಮನೆಗಳಿಗೆ ಹಾನಿ

Pinterest LinkedIn Tumblr

pvec22kl16wdi2,ಬೆಂಗಳೂರು: ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಕೊಡಗು, ಹಾಸನ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಕಾವೇರಿ ಕಣಿವೆಯಲ್ಲಿ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್‌ ಒಳಹರಿವಿನಲ್ಲಿ ಸ್ವಲ್ಪ ಏರಿಕೆಯಾಗಿದೆ.

ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಮೂರು ಕಡೆ ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾ ಯಿತು.ಬುಧವಾರ ಸಂಜೆ 6ಗಂಟೆ ಸುಮಾರಿಗೆ ಆರಂಭವಾದ ಮಳೆ ಬೆಳಗಿನ ಜಾವ 4ಗಂಟೆ ವರೆಗೆ ಸುರಿಯಿತು.

ತಾಲ್ಲೂಕಿನ ಪಾಣೇಗಾಂವ್‌ನಲ್ಲಿ ಸೇತುವೆ ಮುಳುಗಡೆಯಾಗಿದ್ದು, ಇದರಿಂದಾಗಿ ಕಲಬುರ್ಗಿ–ಪಾಣೇಗಾಂವ್ ಮಧ್ಯದ ಸಂಪರ್ಕ ಕಡಿತಗೊಂಡಿತು. ಚಿತ್ತಾಪುರ ತಾಲ್ಲೂಕಿನ ಕಾಗಿಣಾ ಮತ್ತು ಸೇಡಂ ತಾಲ್ಲೂಕಿನ ಕಮಲಾವತಿ ನದಿಗಳಲ್ಲಿ ಪ್ರವಾಹ ಉಂಟಾದರಿಂದ ಮಳಖೇಡ ಹಾಗೂ ದಂಡೋತಿ ಸೇತುವೆಗಳ ಮೇಲೆ ನೀರು ಹರಿಯಿತು.

ಅಲ್ಲದೆ ಹೊಲಗಳಿಗೆ ನೀರು ನುಗ್ಗಿದ್ದು ಕೆಲವೆಡೆ ಬೆಳೆ ಹಾನಿಯಾಗಿದೆ. ಸೇಡಂ ಮತ್ತು ಚಿಂಚೋಳಿ ತಾಲ್ಲೂಕುಗಳಲ್ಲಿ 130ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ವಾಡಿ ಸಮೀಪದ ಬಳ ವಡ್ಗಿ ಗ್ರಾಮವು ಜಲಾವೃತಗೊಂಡಿದೆ.

ಸೇಡಂನಲ್ಲಿ 25 ವರ್ಷಗಳ ನಂತರ ದಾಖಲೆ ಮಳೆಯಾಗಿದೆ. ಹಿಂದೆ 100 ಮಿ.ಮೀ ಮಳೆಯಾಗಿತ್ತು. ಈಗ 150.5 ಮಿ.ಮೀ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೀದರ್ ಜಿಲ್ಲೆಯ ವಿವಿಧೆಡೆ ಗುರುವಾರ ಬೆಳಗಿನ ಜಾವ ಹಾಗೂ ಸಂಜೆ ಧಾರಾಕಾರ ಮಳೆ ಸುರಿಯಿತು.

ಮಧ್ಯಾಹ್ನ ಕೆಲಹೊತ್ತು ಬಿಸಿಲು ಕಾಣಿಸಿಕೊಂಡು ಸಂಜೆ 6 ಗಂಟೆ ಸುಮಾರಿಗೆ ನಗರದಲ್ಲಿ ಮಳೆ ಅಬ್ಬರಿಸಿತು.

ಕೆಆರ್‌ಎಸ್‌ ಒಳಹರಿವು ಹೆಚ್ಚಳ: ಕಾವೇರಿ ಕಣಿವೆಯಲ್ಲಿ ಗುರುವಾರ ಸಹ ಸಾಧಾರಣ ಮಳೆಯಾಗಿದ್ದು, ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆಯ ಒಳಹರಿವಿನಲ್ಲಿ ಸ್ವಲ್ಪ ಹೆಚ್ಚಳವಾಗಿದೆ.

ಬುಧವಾರ 6,640 ಕ್ಯುಸೆಕ್‌ ಇದ್ದ ಒಳಹರಿವು ಗುರುವಾರ ಸಂಜೆ 9,706ಕ್ಕೆ ಹೆಚ್ಚಿದೆ. ಜಲಾಶಯದ ಹೊರಹರಿವಿನ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ನೀರಿನ ಮಟ್ಟ 98.45 ಅಡಿ ತಲುಪಿದೆ.ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿಯಿತು. ನಾಪೋಕ್ಲು, ಭಾಗಮಂಡಲ, ತಲಕಾ ವೇ ರಿಯಲ್ಲೂ ಮಳೆಯ ಪ್ರಮಾಣ ತಗ್ಗಿದ್ದು, ಶೀತಗಾಳಿ ಮುಂದುವರಿದಿದೆ.

ಉತ್ತಮ ಮಳೆ: ಶಿವಮೊಗ್ಗ ಜಿಲ್ಲೆಯ ಹಲವೆಡೆ ಗುರುವಾರ ತುಂತುರು ಮಳೆಯಾಗಿದೆ. ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಸೊರಬ, ರಿಪ್ಪನ್‌ಪೇಟೆ ಭಾಗಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಹೊಸನಗರ ತಾಲ್ಲೂಕಿನ ಕೆಲವೆಡೆ ಉತ್ತಮ ಮಳೆಯಾಗಿದೆ.

ಜಿಟಿ ಜಿಟಿ ಮಳೆ: ನೆರೆಯ ಮಹಾ ರಾಷ್ಟ್ರದಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದ್ದರಿಂದ ಬೆಳಗಾವಿ ಜಿಲ್ಲೆಯ ನದಿಗಳಿಗೆ ಹರಿದುಬರುತ್ತಿದ್ದ ನೀರಿನ ಪ್ರಮಾಣ ಗುರುವಾರ ಕಡಿಮೆಯಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಹೊರಬಿಡಲಾಗುವ ನೀರಿನ ಪ್ರಮಾಣ 29,504 ಕ್ಯುಸೆಕ್‌ಗೆ ಇಳಿದಿದೆ. ಇದಲ್ಲದೇ ಬಳ್ಳಾರಿ, ಬೆಳಗಾವಿ, ಹಾವೇರಿ, ಧಾರವಾಡ, ಗದಗ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯಾಗಿದೆ.

Comments are closed.