ಕರ್ನಾಟಕ

ಇದು ರಾಕ್ಷಸರ ರಾಜ್ಯವೇ..ಅಥವಾ ಗೂಂಡಾ ರಾಜ್ಯವೇ..ಸಿಎಂ ಸ್ಪಷ್ಟಪಡಿಸಬೇಕು

Pinterest LinkedIn Tumblr

kumaranna

ಗದಗ: ಅಧಿಕಾರಿಗಳನ್ನು ಬಲಿ ಪಡೆಯುತ್ತಿರುವ ಈ ರಾಜ್ಯ ಸರ್ಕಾರ ರಾಕ್ಷಸರ ರಾಜ್ಯವೇ… ಅಥವಾ ಗೂಂಡಾ ರಾಜ್ಯವೇ… ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗುಡುಗಿದ್ದಾರೆ.

ಇಂದಿಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಎಷ್ಟು ಜನ ಅಧಿಕಾರಿಗಳನ್ನು ಬಲಿ ತೆಗೆದುಕೊಳ್ಳುತ್ತೀರಾ, ಇಂಥ ಪ್ರಕರಣಗಳಿಗೆ ಇತಿಶ್ರೀ ಹಾಡಿ ರಾಜ್ಯದ ಜನರನ್ನು ಕಾಪಾಡಿ ಎಂದು ಹೇಳಿದರು. ಹಾಸನದ ಉಪವಿಭಾಗಾಧಿಕಾರಿ ವಿಜಯ ಅವರ ಆತ್ಮಹತ್ಯೆ ಯತ್ನ ಪ್ರಕರಣ ಸರ್ಕಾರಕ್ಕೆ ಮುಜುಗರ ತರುವ ವಿಷಯ. ಇವರನ್ನು ವರ್ಗಾವಣೆ ಮಾಡಿದ್ದರಿಂದ ಪ್ರಶ್ನಿಸಿ ಕೆಎಟಿಗೆ ಹೋಗಿದ್ದರು. ಕೆಎಟಿ ವರ್ಗಾವಣೆಯನ್ನು ರದ್ದುಪಡಿಸಿತ್ತು.

ಮತ್ತೆ ಕೆಲಸಕ್ಕೆ ಆಗಮಿಸಿದಾಗ ಮೇಲಾಧಿಕಾರಿಗಳು ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು. ಇದಕ್ಕೂ ಮುನ್ನ ಮುದ್ದೆಬಿಹಾಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳು ಭಯದ ನೆರಳಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರದ 3ವರ್ಷಗಳ ಸಾಧನೆ ಶೂನ್ಯ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಭ್ರಷ್ಟಾಚಾರ ಮಿತಿ ಮೀರಿದೆ ರೈತರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ನೆರವಿಗೆ ಧಾವಿಸಿಲ್ಲ, ಬೆಳೆ ವಿಮೆ ನೀಡಿಲ್ಲವೆಂದು ದೂರಿದರು.

ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಸರಣಿ ಆತ್ಮಹತ್ಯೆ ನಡೆದಿರುವುದು, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಹಾಗೂ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರವನ್ನು ಸರ್ಕಾರ ನಡೆಸಿದೆ. ತಪ್ಪಿಸ್ಥರನ್ನು ವ್ಯವಸ್ಥಿತವಾಗಿ ರಕ್ಷಿಸುವ ಕಾರ್ಯ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಉತ್ತಮ ಕೆಲಸಗಾರರು, ಅವರು ಇನ್ನೂ ಕಾಂಗ್ರೆಸ್‍ಲ್ಲಿಯೇ ಇದ್ದಾರೆ, ನನ್ನ ಅವರ ಬಾಂಧವ್ಯ ಚೆನ್ನಾಗಿದೆ ಎಂದರು. ನಗರದ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನಕ್ಕೆ ಬೆಳ್ಳಿ ಮೂರ್ತಿ ಹಾಗೂ ಶರಣ ಚನ್ನಮಲ್ಲಪ್ಪ ಕುಂಬಾರ ಅವರ ಮೂರ್ತಿ ಪ್ರತಿಷ್ಟಾಪನೆಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವೆಂದರು. ಕುಮಾರಸ್ವಾಮಿ ಅವರು ಪತ್ನಿ ಅನಿತಾ ಸಮೇತ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಮನೆಗೆ ಭೇಟಿ ನೀಡಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

Comments are closed.