ಕರ್ನಾಟಕ

ರಸ್ತೆ ಅಪಘಾತ ತಪ್ಪಿಸಲು ತ್ರಿಡೀ ಹಂಪ್ಸ್

Pinterest LinkedIn Tumblr

road

ಬೆಂಗಳೂರು: ನಗರದಲ್ಲಿ ಅಪಘಾತಗಳು ಹೆಚ್ಚಾಗಲು ರಸ್ತೆ ಗುಂಡಿಗಳು ಹಾಗೂ ಅವೈಜ್ಞಾನಿಕ ಹಂಪ್ಸ್‍ಗಳು ಕಾರಣವಾಗಿದೆ. ಅಪಘಾತಗಳನ್ನು ತಪ್ಪಿಸಲು ತ್ರಿಡೀ ಹಂಪ್ಸ್ ಚಿತ್ರ ನೆರವಾಗಲಿದೆ. ಕೇಂದ್ರ ಸಾರಿಗೆ ಮಂತ್ರಾಲಯವು ಹಲವಾರು ಸಮೀಕ್ಷೆಗಳನ್ನಾಧರಿಸಿ ರಸ್ತೆ ಅಪಘಾತ ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ತ್ರಿಡೀ ಹಂಪ್ಸ್ ಚಿತ್ರ ಹಾಕಲು ನಿರ್ಣಯಕೈಗೊಂಡಿದೆ.

ತ್ರಿಡೀ ಹಂಪ್ಸ್ ಚಿತ್ರಗಳನ್ನು ವಾಹನ ಸವಾರರು ನೋಡಿದಾಕ್ಷಣ ಅವರಿಗೆ ರಸ್ತೆ ದಿಣ್ಣೆಯಂತೆ ಕಾಣಿಸುತ್ತದೆ. ಆಗ ಅವರು ಹಂಪ್ಸ್ ಎಂದು ತಿಳಿದು ವಾಹನವನ್ನು ನಿಧಾನವಾಗಿ ಚಲಾಯಿಸುತ್ತಾರೆ.

ಇದು ನೈಜ ದಿಣ್ಣೆ ಅಲ್ಲವೆಂದು ಗೊತ್ತಿದ್ದರೂ ಆ ಜಾಗಕ್ಕೆ ಬಂದಾಗ ಅಚಾನಕ್ಕಾಗಿ ಚಾಲಕನಿಗೆ ವಾಹನವನ್ನು ನಿಧಾನವಾಗಿ ಓಡಿಸಬೇಕೆಂದು ಮನಸ್ಸಿಗೆ ಬರುತ್ತದೆ. ಇದು ಪ್ರಯೋಗಾತ್ಮಕ ಸಮೀಕ್ಷೆಯಿಂದ ದೃಢಪಟ್ಟಿದೆ.
ದೆಹಲಿ ಮಹಾನಗರ ಪಾಲಿಕೆಯು ಪ್ರಾಯೋಗಿಕವಾಗಿ ಈಗಾಗಲೇ ತ್ರಿಡೀ ಹಂಪ್ಸ್ ಚಿತ್ರಕ್ಕೆ ಮೊರೆ ಹೋಗಿದೆ. ಕೆಲವು ರಸ್ತೆಗಳಲ್ಲಿ ದಿಣ್ಣೆಗಳನ್ನು ಹೋಲುವ ತ್ರಿಡೀ ಪೇಯಿಟಿಂಗ್ ಮಾಡಲಾಗಿದೆ. ಇದರಿಂದ ಗಣನೀಯ ಪ್ರಮಾಣವಾಗಿ ಅಪಘಾತಗಳು ಕಡಿಮೆಯಾಗುತ್ತಿವೆ ಎಂಬುದು ದೆಹಲಿ ಮಹಾನಗರ ಪಾಲಿಕೆ ಮತ್ತು ರಸ್ತೆ ಸಾರಿಗೆ ಇಲಾಖೆಗೆ ಮನವರಿಕೆಯಾಗಿದೆ.

ಇದೇ ಮಾದರಿಯ ತ್ರಿಡೀ ಹಂಪ್ಸ್ ಚಿತ್ರಗಳನ್ನು ಬೆಂಗಳೂರು ಮಹಾನಗರದಲ್ಲಿ ಹಾಕಿದರೆ ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕಡಿಮೆಯಾಗುವ ಸಾಧ್ಯತೆ ಇದೆ. ದೆಹಲಿ ಮಾದರಿಯನ್ನು ಇಲ್ಲಿಯೂ ಅನುಸರಿಸಬೇಕೆಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಅಮರೇಶ್ ಬಿಬಿಎಂಪಿಗೆ ಸಲಹೆ ನೀಡಿದೆ. ಜೊತೆಗೆ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ಅವರು ಪತ್ರ ಬರೆದಿದ್ದಾರೆ.

Comments are closed.