ಕರ್ನಾಟಕ

ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ– ತೇಜಸ್‌ ಅಪಹರಣ ಪ್ರಕರಣ; ಖಾಂಡ್ಯ ಪ್ರವೀಣ್‌ ಪತ್ನಿ ವಿಚಾರಣೆ; ಸಹಚರ ಅಭಿರಾಮ ಬಂಧನ

Pinterest LinkedIn Tumblr

20ckm4ep-(1)ಚಿಕ್ಕಮಗಳೂರು: ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಮತ್ತು ತೇಜಸ್‌ ಅಪಹರಣದ ಪ್ರಮುಖ ಸೂತ್ರಧಾರ, ವಿಶ್ವ ಹಿಂದೂ ಪರಿಷತ್‌ ಶಿವಮೊಗ್ಗ ವಿಭಾಗೀಯ ಸಂಚಾಲಕ ಖಾಂಡ್ಯ ಪ್ರವೀಣನ ಸಹಚರ ಅಭಿರಾಮ ಎಂಬಾತನನ್ನು ಸಿಐಡಿ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿತರ ಸಂಖ್ಯೆ ಮೂರಕ್ಕೇರಿದೆ.

‘ಬಂಧಿತ ಆರೋಪಿ ಸಿಎಸ್‌ಎಫ್‌ ನಿವೃತ್ತ ಯೋಧನ ಪುತ್ರ. ಬೆಂಗಳೂರಿನ ನಿವಾಸಿಯಾಗಿದ್ದು, ಈತನನ್ನು ಮಂಗಳವಾರ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಆರೋಪಿಯನ್ನು ಬಿಗಿಭದ್ರತೆಯಲ್ಲಿ ನಗರದ ಸಿಐಡಿ ತಾತ್ಕಾಲಿಕ ಕಚೇರಿಗೆ ಕರೆತಂದರು.

ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ವಿಚಾರಣೆ ವೇಳೆ ಪ್ರದೀಪ ನೀಡಿದ ಸುಳಿವು ಆಧರಿಸಿ, ಆರೋಪಿ ಅಭಿರಾಮನನ್ನು ತನಿಖಾ ತಂಡ ಬಂಧಿಸಿದೆ. ತಲೆ ಮರೆಸಿಕೊಂಡಿರುವ ಪ್ರಕರಣದ ಸೂತ್ರಧಾರ ಖಾಂಡ್ಯ ಪ್ರವೀಣ್‌, ಈತನ ಸಹಚರರಾದ ನವೀನ್‌ ಶೆಟ್ಟಿ ಹಾಗೂ ಈತನ ಮಗ ಅಶ್ವಿತ್‌ ಶೆಟ್ಟಿ, ಅಪಹರಣದಲ್ಲಿ ಭಾಗಿಯಾಗಿರುವ ಜೀವ ಹಾಗೂ ಇತರರನ್ನು ಬಂಧಿಸಲು ಸಿಐಡಿ ತಂಡಗಳು ರಾಜ್ಯ ಮತ್ತು ಹೊರ ರಾಜ್ಯದಲ್ಲಿ ತೀವ್ರ ಶೋಧ ನಡೆಸುತ್ತಿವೆ’ ಎಂದು ಮೂಲಗಳು ಹೇಳಿವೆ.

ಆರೋಪಿ ಅಭಿರಾಮ, ತೇಜಸ್‌ ಅಪಹರಿಸುವ ಮೊದಲು, ಜೂನ್‌ 26ರಂದು ತಾಲ್ಲೂಕಿನ ಚಿಕ್ಕೊಳಲೆ ಮಾಧವ ಎಂಬಾತನ ತೋಟದಲ್ಲಿ ನಡೆಯುತ್ತಿದ್ದ ಜೂಜಾಟದಲ್ಲಿ ಸೆರೆ ಸಿಕ್ಕಿದ್ದ ಆರೋಪಿಗಳ ಬಿಡುಗಡೆಗೆ ಗ್ರಾಮಾಂತರ ಪೊಲೀಸ್‌ ಠಾಣೆಗೆ ಹೋಗಿ, ಜಾಮೀನಿಗೆ ಸಹಿ ಹಾಕಿದ್ದ.

‘ತಾನು ಖಾಂಡ್ಯ ಪ್ರವೀಣ್‌ ಕಾರು ಚಾಲಕ, ವಿಜಯಪುರ ವಾಸಿ’ ಎಂದು ಸುಳ್ಳು ವಿಳಾಸ ನೀಡಿದ್ದ. ಠಾಣೆಯಿಂದ ಬಿಡುಗಡೆಯಾದ ನಂತರ ಔತಣಕೂಟ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ತೇಜಸ್‌ನನ್ನು ಹಿಂಬಾಲಿಸಿ, ಆತನ ಮನೆ ಸಮೀಪ ಅಡ್ಡಗಟ್ಟಿ ಸ್ಕಾರ್ಪಿಯೋದಲ್ಲಿ ಅಪಹರಿಸಿದ್ದರು. 6 ಮಂದಿ ಅಪಹರಣಕಾರರಲ್ಲಿ ಆರೋಪಿ ಅಭಿರಾಮ್‌ ಒಬ್ಬ.

ಫೈನಾನ್ಶಿಯರ್‌ ತೇಜಸ್‌ ಎಂಬಾತನಿಂದ ತನಗೆ ಬರಬೇಕಿದ್ದ ಬಾಕಿ ಹಣ ವಸೂಲಿ ಮಾಡಿಕೊಡುವಂತೆ ಕಲ್ಮನೆ ಚಿಟ್‌ಫಂಡ್‌ ಮುಖ್ಯಸ್ಥ ನಟರಾಜ್‌, ಖಾಂಡ್ಯ ಪ್ರವೀಣ್‌ಗೆ ಸುಪಾರಿ ನೀಡಿದ್ದ. ಕಳೆದ ಜೂನ್‌ 27ರಂದು ತೇಜಸ್‌ನನ್ನು ಅಪಹರಿಸಿ, ₹10 ಲಕ್ಷ ಹಣ ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಅವರ ಕೈಸೇರುವಂತೆ ಪ್ರಕರಣದ ಪ್ರಮುಖ ಸೂತ್ರಧಾರ ಪ್ರವೀಣ್ ಮಾಡಿದ್ದ.

ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಲ್ಮನೆ ಚಿಟ್‌ಫಂಡ್‌ ಮುಖ್ಯಸ್ಥ ನಟರಾಜ್‌ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮತ್ತೊಬ್ಬ ಆರೋಪಿ, ಪ್ರವೀಣನ ಸಹಚರ ಪ್ರದೀಪ ಸಿಐಡಿ ವಶದಲ್ಲಿದ್ದು, ಆತನ ವಿಚಾರಣೆಯನ್ನು ತನಿಖಾಧಿಕಾರಿಗಳು ಮುಂದುವರಿಸಿದ್ದಾರೆ’ ಎನ್ನುತ್ತವೆ ಮೂಲಗಳು.

ತನಿಖೆಯ ಪ್ರಗತಿ ಪರಿಶೀಲಿಸಲು ಸಿಐಡಿ ಎಡಿಜಿಪಿ ಪ್ರತಾಪ್‌ ರೆಡ್ಡಿ ಬುಧವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ಅವರು ನಗರದಲ್ಲಿ ಮೊಕ್ಕಾಂ ಮಾಡಿದ್ದಾರೆ.

ಖಾಂಡ್ಯ ಪ್ರವೀಣ್‌ ಪತ್ನಿ ವಿಚಾರಣೆ
ಚಿಕ್ಕಮಗಳೂರು: ಪ್ರಕರಣದ ಸೂತ್ರಧಾರ ಖಾಂಡ್ಯ ಪ್ರವೀಣನ ಪತ್ನಿ ರೇಷ್ಮಾ (ಪ್ರಿಯಾ) ಎಂಬುವವರನ್ನು ಸಿಐಡಿ ತನಿಖಾಧಿಕಾರಿಗಳು ಬುಧವಾರ ವಿಚಾರಣೆಗೆ ಒಳಪಡಿಸಿದರು.

‘ಮಧ್ಯಾಹ್ನ 1.30ರ ಸುಮಾರಿಗೆ ನಗರದಲ್ಲಿರುವ ಸಿಐಡಿ ತಾತ್ಕಾಲಿಕ ಕಚೇರಿಗೆ ಕರೆತಂದು ಸಂಜೆವರೆಗೂ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡರು.

ಪ್ರವೀಣನ ಆಪ್ತರಾದ ಬಜರಂಗ ದಳಕ್ಕೆ ಸೇರಿದ 6 ಯುವಕರನ್ನು ಬಾಳೆಹೊನ್ನೂರು ಪೊಲೀಸ್‌ ಠಾಣೆಗೆ ಕರೆಸಿಕೊಂಡು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಖಾಂಡ್ಯ ಪ್ರವೀಣನ ತಂದೆ–ತಾಯಿ ಹೇಳಿಕೆ ದಾಖಲಿಸಿ ಕೊಳ್ಳಲಾಯಿತು. ದೂರುದಾರ ತೇಜಸ್‌ ವಿಚಾರಣೆ ನಡೆಸಿ, ಹೇಳಿಕೆ ಪಡೆಯಲಾಯಿತು’ ಎಂದು ಮೂಲಗಳು ಹೇಳಿವೆ.

Comments are closed.