ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಲ್ಲಿ ನವಜಾತು ಶಿಶುವನ್ನು ಅಪಹರಣ ಮಾಡಿದ್ದ ಘಟನೆ ಮಾಸುವ ಮುನ್ನವೇ ಪರಿಚಿತರ 9 ತಿಂಗಳ ಗಂಡು
ಮಗುವಿನೊಂದಿಗೆ ಪರಾರಿಯಾಗಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ವಾಸವಿರುವ ಸಂಧ್ಯಾ ಮತ್ತು ಏಳುಮಲೈ ದಂಪತಿಯ 9 ತಿಂಗಳ ಮಗು (ಲೋಕೇಶ್)
ಅಪಹರಣವಾಗಿದ್ದು, ಘಟನೆ ನಡೆದ 12 ಗಂಟೆಯಲ್ಲೇ ಆರೋಪಿ ದಂಪತಿಯನ್ನು ಬಂಧಿಸಿ, ಮಗುವನ್ನು ತಾಯಿ ಮಡಿಲಿಗೆ ಸುರಕ್ಷಿತವಾಗಿ ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ಜಾನಕಿ (36) ಈಕೆಯ ಪತಿ ರಾಮು (39) ಬಂಧಿತರು. ಮಕ್ಕಳಿಲ್ಲದ ಕಾರಣ ಆರೋಪಿ ದಂಪತಿ ಟೈಲರ್ ಮಷಿನ್ ಕೊಡಿಸುವ ನೆಪದಲ್ಲಿ ಮಗುವಿನ ತಾಯಿಯನ್ನು ಕರೆದುಕೊಂಡು ಹೋಗಿ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾಟನ್‌ಪೇಟೆ ಪೊಲೀಸರು ದಂಪತಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ತರಕಾರಿ ಸ್ನೇಹ: ಮೂಲತಃ ತಮಿಳುನಾಡು ಮೂಲದವರಾದ ಸಂಧ್ಯಾ ಮತ್ತು ಏಳುಮಲೈ ದಂಪತಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದು, ಚನ್ನಮ್ಮನ ಕೆರೆ ಅಚ್ಚಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಧ್ಯಾ ತರಕಾರಿ ಅಂಗಡಿ ಇಟ್ಟುಕೊಂಡಿದ್ದರೆ ಪತಿ ಗಾರೆ ಕೆಲಸ ಮಾಡುತ್ತಿದ್ದರು. ಅದೇ ಪ್ರದೇಶದಲ್ಲಿ ವಾಸವಿರುವ ಜಾನಕಿ, ರಾಮು ದಂಪತಿ ಆರು ತಿಂಗಳಿಂದ ಇವರ ಅಂಗಡಿಗೆ ಬರುತ್ತಿದ್ದರು. ರಾಮು ಕಾಪೆìಂಟರ್ ಆಗಿದ್ದು, ಜಾನಕಿ ಟೈಲರಿಂಗ್ ಕೆಲಸ ಮಾಡುತ್ತಿದ್ದಳು. ಸಂಧ್ಯಾ ಅವರ ಅಂಗಡಿಯಲ್ಲಿ ಜಾನಕಿ ನಿತ್ಯ ತರಕಾರಿ ಕೊಳ್ಳುತ್ತಿದ್ದರಿಂದ ಇವರ ನಡುವೆ ಸ್ನೇಹವಾಗಿತ್ತು.
ಬಳಿಕ ಸಂಧ್ಯಾ, ಜಾನಕಿಯ ಬಳಿ ಹಳೆಯ ಟೈಲರಿಂಗ್ ಮೆಷಿನ್ ಕೊಡಿಸುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ್ದ ಜಾನಕಿ, ತಮಗೆ ಮಕ್ಕಳಿಲ್ಲದ ಕಾರಣ
ಸಂಧ್ಯಾ ಬಳಿಯಿರುವ 9 ತಿಂಗಳ ಮಗುವಿನ ಮೇಲೆ ಕಣ್ಣಿಟ್ಟಿದ್ದರು. ಭಾನುವಾರ ರಾತ್ರಿ 7 ಗಂಟೆ ಸುಮಾರಿಗೆ ಏಳುಮಲೈ ಮನೆಯಲ್ಲಿದ್ದ ವೇಳೆ ದಂಪತಿ
ಸಂಧ್ಯಾ ಮನೆಗೆ ಬಂದಿದ್ದು, ಟೈಲರಿಂಗ್ ಮಷಿನ್ ತೆಗೆದುಕೊಂಡು ಬರೋಣವೆಂದು ಹೇಳಿದ್ದಾರೆ.
ಹಣವಿಲ್ಲ ಮತ್ತೂಂದು ದಿನ ಹೋಗೋಣ ಎಂದು ಸಂಧ್ಯಾ ಹೇಳಿದ್ದು, ನಮ್ಮ ಬಳಿ ಹಣವಿದೆ. ನಿಧಾನವಾಗಿ ಹಣ ಹಿಂದಿರುಗಿಸು ಎಂದು ಮಗುವಿನೊಂದಿಗೆ ಸಂಧ್ಯಾಳನ್ನು ಕರೆದೊಯ್ಯದಿದ್ದಾರೆ. ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿನ್ನಿಪೇಟೆ ಕ್ರಾಸ್‌ನಲ್ಲಿ ಹೊಸ ಟೈಲರಿಂಗ್ ಮಷಿನ್
ಕೊಂಡು, ಆಟೋದಲ್ಲಿ ಹಾಕಿದ್ದಾರೆ. ಬಳಿಕ ಸಂಧ್ಯಾ ಅವರನ್ನು ಕೂರಿಸಿ ಮಷಿನ್ ಇರುವುದರಿಂದ ಈ ಆಟೋದಲ್ಲಿ ಕೂರಲು ಆಗುವುದಿಲ್ಲ. ನೀನು ಹೋಗು ಮಗುವಿನೊಂದಿಗೆ ನಾವು ಬೇರೆ ಆಟೋದಲ್ಲಿ ಬರುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ. ಮಗುವಿನ ತಾಯಿ ಮನೆಗೆ ಹೋಗಿ
ಗಂಟೆಯಾದರೂ ದಂಪತಿ ಬಂದಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದರೆ “ಸ್ವಿಚ್ ಆಫ್’ ಎಂದು ಬರುತ್ತಿತ್ತು. ಕೂಡಲೇ ಹೋಗಿ ಅವರ ಮನೆ ಬಳಿ
ನೋಡಿದರೆ ಶನಿವಾರ ಮಧ್ಯಾಹ್ನವೇ ಮನೆ ಖಾಲಿ ಮಾಡಿರುವ ವಿಷಯ ತಿಳಿದಿದೆ. ಗಾಬರಿಯಿಂದ ತಕ್ಷಣವೇ ಪೊಲೀಸರಿಗೆ ದಂಪತಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮೊಬೈಲ್‌ನಿಂದ ಸಿಕ್ಕಿ ಬಿದ್ದರು: ಕೂಡಲೇ ತಂಡ ರಚಿಸಿ ಕಾರ್ಯಾಚರಣೆಗಿಳಿದ ಪೊಲೀಸರು ದಂಪತಿಯನ್ನು ಮೊಬೈಲ್ ಟವರ ಮೂಲಕ ಕೆಂಗೇರಿಯಲ್ಲಿ ಪತ್ತೆ ಹಚ್ಚಿದರು. ಆರೋಪಿಗಳನ್ನು ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬಂಧಿಸಿದ್ದಾರೆ. ದಂಪತಿಗೆ ಮದುವೆಯಾಗಿ ಸುಮಾರು ವರ್ಷಗಳಾಗಿದ್ದು ಮಕ್ಕಳಿರಲಿಲ್ಲ. ಮಕ್ಕಳ ಮೇಲಿನ ಪ್ರೀತಿಯಿಂದಾಗಿ ಈ ಕೃತ್ಯವೆಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದರು.
-ಉದಯವಾಣಿ
Comments are closed.