ಕರ್ನಾಟಕ

ಮನಸ್ಸು ಉಲ್ಲಾಸಿತವಾಗಿದ್ದರೆ ನೆಮ್ಮದಿ ಬದುಕು: ಡಿವಿಎಸ್

Pinterest LinkedIn Tumblr

dvsಬೆಂಗಳೂರು, ಜು. ೧೭- ಮಾನವ ಸಂಘಜೀವಿ. ಇದನ್ನು ಪ್ರತಿಯೊಬ್ಬರೂ ಅರಿತು ಸಮಾಜ ಮತ್ತು ಪ್ರಕೃತಿ ಜತೆ ಉತ್ತಮ ಸಂಬಂಧ ಹೊಂದುವುದನ್ನು ರೂಢಿಸಿಕೊಳ್ಳಬೇಕು. ಉಲ್ಲಾಸ, ಉತ್ಸಾಹ ಹಾಗೂ ನಿರುಪದ್ರವಿ ಮನಸ್ಸು ಹೊಂದುವುದರಿಂದ ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಕಂಡುಕೊಳ್ಳಬಹುದು ಎಂದು ಕೇಂದ್ರ ಅಂಕಿ ಅಂಶ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟರು.

ಭಾರತೀಯ ವಿದ್ಯಾಭವನದಲ್ಲಿ ಡಾ. ಸಿ.ಸೋಮಶೇಖರ- ಶ್ರೀಮತಿ ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ಮನುಷ್ಯನಿಗೆ ಏನೆಲ್ಲಾ ಸೌಲಭ್ಯಗಳನ್ನು ಕೊಟ್ಟಿದೆ. ನಾವು ಪಡೆದಿರುವ ಪ್ರತಿಯೊಂದೂ ಸಹ ಈ ಕ್ರಕೃತಿಯಿಂದ ಬಂದಿದ್ದೇ ಆಗಿದೆ. ಆದರೆ ಇದನ್ನು ಮರೆಯುವ ನಾವು ಪ್ರಕೃತಿಯನ್ನು ವಿಕೃತಿಗೊಳಿಸಲು ಹೋಗುತ್ತೇವೆ ಎಂದರು.

ಕಷ್ಟ ಪಟ್ಟರೆ ಯಶಸ್ಸು ಸಿಗುತ್ತದೆ. ಛಲ ಮತ್ತು ಗುರಿ ಹೊಂದಿದ್ದರೆ ಸಾಧನೆ ಸಿಕ್ಕೇ ಸಿಗುತ್ತದೆ. ಸಾಧಕರ ಬದುಕನ್ನು ನೋಡಿ, ಓದಿ ತಿಳಿದುಕೊಳ್ಳಬೇಕು. ಸದಾ ಸಮಾಜಮುಖಿ ಕಾರ್ಯದತ್ತ ಮನಸ್ಸು ತುಡಿಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

೨೦೧೬ ನೇ ಸಾಲಿನ ಸಂಸ್ಕೃತಿ ಸಂಗಮ ಪ್ರಶಸ್ತಿಗೆ ಪಾತ್ರರಾಗಿದ್ದ ಜನಪದ ಸಾಹಿತ್ಯ ಕ್ಷೇತ್ರದಿಂದ ನಾಡೋಜ ಡಾ.ಚಂದ್ರಶೇಖರ ಕಂಬಾರ, ವಚನ ಸಾಹಿತ್ಯದಿಂದ ಡಾ. ಚಿದಾನಂದಮೂರ್ತಿ, ದಾಸ ಸಾಹಿತ್ಯದಿಂದ ಡಾ. ಟಿ.ಎಸ್.ನಾಗರತ್ನ ಹಾಗೂ ಸಂಗೀತ ಕ್ಷೇತ್ರದಿಂದ ರತ್ನಮಾಲಾ ಪ್ರಕಾಶ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ತರಳಬಾಳು ಮಠಾಧೀಶರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಸೋಮಶೇಖರ ಮತ್ತಿತರರು ಉಪಸ್ಥಿತರಿದ್ದರು.

Comments are closed.