ಬೆಳಗಾವಿ: ಸಾಧ್ಯವಿಲ್ಲ ಮೇಡಂ…ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸೀಜ್ ಮಾಡಿದ್ದೇನೆ. ನಮಗೂ ಕಾನೂನು ಗೊತ್ತು, ಬಿಟ್ಟು ಕಳುಹಿಸಿ…ಇದು ಮರಳು ಲಾರಿಯನ್ನು ತಡೆಹಿಡಿದ ಬೆಳಗಾವಿ ಪಿಎಸ್ಐ ಉದ್ದಪ್ಪ ಅವರಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದೂರವಾಣಿ ಮೂಲಕ ಧಮ್ಕಿ ಹಾಕಿದ ಪರಿ!
ಬೆಳಗಾವಿಯಲ್ಲಿ ನಾಲ್ಕು ದಿನಗಳ ಹಿಂದೆ ನಡೆದಿದ್ದ ಘಟನೆ ಶನಿವಾರ ಮಾಧ್ಯಮಗಳಲ್ಲಿ ಹೆಬ್ಬಾಳ್ಕರ್ ದೂರವಾಣಿಯಲ್ಲಿ ಧಮ್ಕಿ ಹಾಕಿರುವ ಘಟನೆ ಪ್ರಸಾರವಾಗುವ ಮೂಲಕ ಕಾಂಗ್ರೆಸ್ ಮತ್ತೆ ಪೇಚಿಗೆ ಸಿಲುಕುವಂತಾಗಿದೆ.
ವಶಕ್ಕೆ ತೆಗೆದುಕೊಂಡಿರುವ ಮರಳು ಲಾರಿಯನ್ನು ಬಿಟ್ಟು ಕಳುಹಿಸಿ ಎಂದು ಹೆಬ್ಬಾಳ್ಕರ್ ದೂರವಾಣಿ ಮೂಲಕ ಪಿಎಸ್ಐಗೆ ಹೇಳಿದಾಗ, ಇಲ್ಲ ಮೇಡಂ ಡಿಸಿ ಅವರ ಆದೇಶದ ಮೇರೆಗೆ 6ಗಂಟೆ ನಂತರ ಸಂಚರಿಸುವ ಮರಳು ಲಾರಿಯನ್ನು ವಶಪಡಿಸಿಕೊಳ್ಳಲು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಅದಕ್ಕೆ ನಮಗೂ ಕಾನೂನು ಗೊತ್ತು…ಲಾರಿ ಬಿಟ್ಟು ಕಳುಹಿಸಿ ಎಂದಾಗ ಪಿಎಸ್ಐ ಉದ್ದಪ್ಪ ಅವರು ಆಗಲ್ಲ ಮೇಡಂ ಎಂದಿದ್ದಾರೆ..ಯಾಕ್ ಆಗಲ್ಲ..ಕೂಡಲೇ ನನ್ನ ಬಂದು ಭೇಟಿಯಾಗಿ ಎಂದಿದ್ದರು. ನಾನ್ ಯಾಕ್ ಮೇಡಂ ನಿಮ್ಮನ್ನು ಭೇಟಿಯಾಗಬೇಕು ಎಂದು ಪಿಎಸ್ಐ ತಿರುಗೇಟು ನೀಡಿದಾಗ, ನಿಮಗೆ ಏನ್ ಮಾಡಬೇಕೆಂದು ನನಗೆ ಗೊತ್ತು, ನಿಮಗೆ ಸ್ವಲ್ಪನಾದ್ರೂ ಮಾನ ಮರ್ಯಾದೆ ಇದೆಯಾ ಎಂದು ಧಮ್ಕಿ ಹಾಕಿರುವುದಾಗಿ ಮಾಧ್ಯಮದ ವರದಿ ಹೇಳಿದೆ.
ನಾ ಧಮ್ಕಿ ಹಾಕಿಲ್ಲ; ಹೆಬ್ಬಾಳ್ಕರ್
ಪಾಸ್ ಇದ್ದ ಮರಳು ಲಾರಿಗಳನ್ನು ಬಿಡಲು ಕರೆ ಮಾಡಿದ್ದೆ. ನನ್ನ ಕ್ಷೇತ್ರದ ಜನರ ಲಾರಿಗಳನ್ನು ಹಿಡಿದಿದ್ದರಿಂದ ಕರೆ ಮಾಡಿದ್ದೆ. ಜನರಿಗೆ ಆದ ಅನ್ಯಾಯವನ್ನು ಪ್ರಶ್ನಿಸಲು ಭಾವೋದ್ವೇಗಕ್ಕೆ ಒಳಗಾಗಿದ್ದೆ. ನಾನು ಪಿಎಸ್ಐ ಅವರಿಗೆ ಧಮ್ಕಿ ಹಾಕಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
-ಉದಯವಾಣಿ
Comments are closed.