ಬೆಂಗಳೂರು, ಜು. ೧೬- ದೊಮ್ಮಲೂರು ಮೇಲ್ಸೇತುವೆಯಲ್ಲಿ ಕಸ ತೆಗೆಯದೇ ಇದ್ದ ಗುತ್ತಿಗೆದಾರರೊಬ್ಬರಿಗೆ 50 ಸಾವಿರ ರೂ. ದಂಡ ವಿಧಿಸಿರುವ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿರವರು ಮೇಲ್ಸೇತುವೆ ಮತ್ತು ಕೆಳ ಸೇತುವೆಗಳಲ್ಲಿ ಸ್ವಚ್ಛತೆ ಕಾಪಾಡದ ಕಸ ನಿರ್ವಹಣೆ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಕೆಳಸೇತುವೆಗಳಲ್ಲಿ ನೀರು ತುಂಬಿಕೊಂಡು ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ನಗರದ ಮಡಿವಾಳ, ದೊಮ್ಮಲೂರು ಸುತ್ತಮುತ್ತಲಿನ ಕೆಳ ಸೇತುವೆ ಮತ್ತು ಮೇಲ್ಸೇತುವೆಗಳ ಸ್ವಚ್ಛತೆ ಪರಿಶೀಲಿಸಿದ ಮೇಯರ್‌ರವರು ಇನ್ನು ಮುಂದೆ ಈ ಪ್ರದೇಶಗಳಲ್ಲಿ ಕಸ ಹಾಗೂ ಗುಂಡಿಗಳು ಕಂಡಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಮಡಿವಾಳ ಕೆಳಸೇತುವೆಗೆ ಭೇಟಿ ನೀಡಿದ ಮೇಯರ್ ಅವರು ಅಲ್ಲಿ ಮಳೆ ನೀರು ತುಂಬಿಕೊಂಡಿರುವ ಬಗ್ಗೆ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ಸಂಜೆಯೊಳಗಾಗಿ ಈ ನೀರನ್ನು ಹೊರ ತೆಗೆಯದಿದ್ದರೆ ಅವರ ವಿರುದ್ಧ ಕ್ರಮ ಅನಿವಾರ್ಯ ಎಂದರು.
ಮಾರತಹಳ್ಳಿ ಕೆಳ ಸೇತುವೆ ಬಳಿ ಪ್ರತಿ ದಿನ ಕಸದ ರಾಶಿ ಹಾಗೂ ಮಳೆಯ ನೀರು ಹಾಗೆಯೇ ಇರುತ್ತವೆ. ಇಂಜಿನಿಯರ್‌ಗಳು ಸ್ವಚ್ಛಗೊಳಿಸಲು ಮುಂದಾಗುವುದಿಲ್ಲ ಎಂದು ಸಾರ್ವಜನಿಕರು ಮೇಯರ್‌ರವರಲ್ಲಿ ದೂರು ನೀಡಿದರು.
ಮಳೆಗಾಲದಲ್ಲಿ ಸದಾ ಕಾಲ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಂಬಂಧಪಟ್ಟವರಿಗೆ ದೂರು ಸಲ್ಲಿಸಿದರೂ ನೀರು ಹೊರ ಹೋಗಲು ಪರ್ಯಾಯ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಮಂಜುನಾಥರೆಡ್ಡಿ ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ಹಾಗೂ ಮಳೆ ನೀರು ಹೊರ ಹೋಗುವಂತೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.
ದೊಂಬಲೂರು ಮೇಲ್ಸೇತುವೆ ಬಳಿ ಕಸದ ರಾಶಿಯೇ ಇದ್ದದ್ದನ್ನು ಕಂಡ ಮೇಯರ್ ಸಿಡಿಮಿಡಿಗೊಂಡು ಗುತ್ತಿಗೆದಾರರಿಗೆ 50 ಸಾವಿರ ರೂ. ದಂಡ ವಿಧಿಸಿದರು. ರಿಚ್ಮಂಡ್ ರಸ್ತೆಯ ಮೇಲ್ಸೇತುವೆ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಹಾಗೆಯೇ ಬಿದ್ದಿದ್ದವು. ಕೂಡಲೇ ಗುಂಡಿಗಳನ್ನು ಮುಚ್ಚಬೇಕು. ಮುಂದಿನ ವಾರ ಮತ್ತೊಮ್ಮೆ ಮೇಲ್ಸೇತುವೆ, ಕೆಳ ಸೇತುವೆ ಪರಿಶೀಲನೆಗೆ ಬರಲಿದ್ದೇನೆ. ಆ ವೇಳೆಗೆ ರಸ್ತೆ ಗುಂಡಿಗಳನ್ನು ಮುಚ್ಚಿರಬೇಕು ಎಂದು ತಾಕೀತು ಮಾಡಿದರು.
Comments are closed.