ಬೆಂಗಳೂರು, ಜು. ೧೫- ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಆಗಿರುವ ಅನ್ಯಾಯದ ಬಗ್ಗೆ ಪ್ರಧಾನಿ, ಕೇಂದ್ರ ಗೃಹ ಸಚಿವರು ಹಾಗೂ ರಾಜ್ಯಪಾಲರಿಗೂ ದೂರು ನೀಡಲು ಬಿಜೆಪಿ ಸಿದ್ದತೆ ನಡೆಸಿದೆ.
ಸಚಿವ ಜಾರ್ಜ್‌ರವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಮುಂದೆ ಬಿಜೆಪಿ ಶಾಸಕರ ಜತೆ ಧರಣಿ ನಡೆಸಿದ ನಂತರ ವಿಧಾನಸಭೆಯ ಮೊಗಸಾಲೆಗೆ ಶಾಸಕರ ಜತೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಲಿಯೇ ವಿಪಕ್ಷ ನಾಯಕರಾದ ಜಗದೀಶ್‌ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಲವು ಪ್ರಮುಖ ಜತೆ ಮುಂದಿನ ಕಾರ್ಯ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.
ಸಚಿವ ಜಾರ್ಜ್‌ರವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಕಳೆದ 2 ದಿನಗಳಿಂದ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದರೂ ಸರ್ಕಾರ ಅದಕ್ಕೆ ಸೊಪ್ಪು ಹಾಕದೆ ನಿರ್ಲಕ್ಷ್ಯ ಭಾವನೆ ತಾಳಿ ಜಾರ್ಜ್ ರಾಜೀನಾಮೆ ಇಲ್ಲ ಎಂಬ ನಿಲುವಿಗೆ ಬಂದಿರುವುದು ಬಿಜೆಪಿ ಮುಖಂಡರಲ್ಲಿ ಸಿಟ್ಟು ತರಿಸಿದೆ.
ಶತಾಯಗತಾಯ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ.
ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಮುಂದುವರೆಸಿದರೆ ಸೋಮವಾರ ಸರ್ಕಾರದ ನಿಲುವಿನ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಲು ತೀರ್ಮಾನಿಸಲಾಗಿದೆ.
ಸೋಮವಾರ ವಿಧಾನಸೌಧದಿಂದ ರಾಜಭವನದವರೆಗೂ ಬಿಜೆಪಿಯ ಎಲ್ಲಾ ಶಾಸಕರು ಹೋಗಿ ರಾಜ್ಯಪಾಲರಿಗೆ ದೂರು ನೀಡುವ ತೀರ್ಮಾನಕ್ಕೂ ಬಿಜೆಪಿ ಬಂದಿದೆ.
ವಿಧಾನಸೌಧದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು, ಸರ್ಕಾರದ ಹಠಮಾರಿ ನಿಲುವನ್ನು ಖಂಡಿಸಿ ರಾಜ್ಯಪಾಲರಿಗೆ ಶಾಸಕರು ದೂರು ನೀಡಲಿದ್ದಾರೆ ಎಂದರು.
ಪ್ರಧಾನಿಗೂ ದೂರು
ಈ ಪ್ರಕರಣದಲ್ಲಿ ಆಗಿರುವ ಅನ್ಯಾಯವನ್ನು ವಿವರಿಸಿ ಪ್ರಧಾನಿ ಹಾಗೂ ಕೇಂದ್ರ ಸಚಿವರಿಗೂ ದೂರು ನೀಡುವ ತೀರ್ಮಾನಕ್ಕೂ ಪಕ್ಷ ಬಂದಿದೆ. ಪ್ರಧಾನಿ ಭೇಟಿಗೆ ಡಿವೈಎಸ್ಪಿ ಗಣಪತಿಯವರ ಪತ್ನಿ ಹಾಗೂ ಪುತ್ರರು ಬಯಸಿದರೆ ಅವರನ್ನು ಬಿಜೆಪಿ ಜತೆಯಲ್ಲಿ ಕರೆದುಕೊಂಡು ಹೋಗಿ ದೂರು ನೀಡಲಿದೆ ಎಂದರು.
ನಾಳೆ ವಿಧಾನಸಭೆಯ ಕಲಾಪಗಳು ಇರುವುದಿಲ್ಲ. ಹಾಗಾಗಿ ಶನಿವಾರ ಮತ್ತು ಭಾನುವಾರ ವಿಧಾನಸಭಾ ಕಲಾಪಕ್ಕೆ ರಜೆ ಇರುವುದರಿಂದ ಬಿಜೆಪಿ ಇಂದು ರಾತ್ರಿ ಮಾತ್ರ ಧರಣಿ ಮುಂದುವರೆಸಲಿದ್ದು, ಶನಿವಾರ ಮತ್ತು ಭಾನುವಾರ ಅಹೋರಾತ್ರಿ ಧರಣಿ ಇರುವುದಿಲ್ಲ. ಆದರೆ ನಾಳೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಉಪನಾಯಕ ಆರ್. ಅಶೋಕ್ ಕೊಡಗಿಗೆ ತೆರಳಿ ಡಿವೈಎಸ್ಪಿ ಗಣಪತಿರವರ ಪತ್ನಿ, ಪುತ್ರರನ್ನು ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಅವರಿಗೆ ವಿಧಾನಸೌಧದಲ್ಲಿ ಯಡಿಯೂರಪ್ಪ ಸೂಚನೆ ನೀಡಿದರು.
ನಾಳೆ ಕೊಡಗಿನಲ್ಲಿ ಹಾಗೂ ಚಿಕ್ಕಮಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಕೊಡಗಿನ ಪ್ರತಿಭಟನೆಯಲ್ಲಿ ಜಗದೀಶ್‌ಶೆಟ್ಟರ್ ಭಾಗವಹಿಸಿದರೆ, ಚಿಕ್ಕಮಗಳೂರಿನ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದಾರೆ.
ಸರ್ಕಾರದ ಮುಂದಿನ ನಿಲುವನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ಹೇಗಿರಬೇಕೆಂಬ ಬಗ್ಗೆ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಮಾಡುವುದಾಗಿಯೂ ಯಡಿಯೂರಪ್ಪ ಹೇಳಿದರು.
Comments are closed.