ಕರ್ನಾಟಕ

ಟೆಂಪೋಗೆ ಬೈಕ್ ಡಿಕ್ಕಿ: ಹೆಲ್ಮೆಟ್ ಹಾಕದ ಇಬ್ಬರ ಸಾವು

Pinterest LinkedIn Tumblr

bike-1ಬೆಂಗಳೂರು,ಜು.೧೪-ಎಡ ತಿರುವು ತೆಗೆದುಕೊಳ್ಳುತ್ತಿದ್ದ ಟೆಂಪೋಗೆ ವೇಗವಾಗಿ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಡಿಕ್ಕಿ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ದೇವನಹಳ್ಳಿಯ ಬಚ್ಚನಹಳ್ಳಿಗೇಟ್ ಬಳಿ ನಡೆದಿದೆ.

ದೇವನಹಳ್ಳಿಯ ಮೋಹನ್(೩೦) ಹಾಗೂ ನೀರುಗಂಟಿಪಾಳ್ಯದ ಮಂಜುನಾಥ(೨೨)ಮೃತಪಟ್ಟವರು.ಇವರಿಬ್ಬರೂ ಹೆಲ್ಮೆಟ್ ಧರಿಸದಿದ್ದರಿಂದ ಡಿಕ್ಕಿಯ ರಭಸಕ್ಕೆ ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಕಾರು ಚಾಲಕನಾಗಿದ್ದ ಮಂಜುನಾಥ್ ಅವರು ತಮ್ಮ ಮನೆಯಲ್ಲಿ ಮರಗೆಲಸ ಮಾಡಿಸಿಕೊಳ್ಳಲು ಬಡಗಿ ಮೋಹನ್ ಅವರನ್ನು ನಿನ್ನೆ ಸಂಜೆ ೫.೧೫ರ ವೇಳೆ ಬೈಕ್‌ನಲ್ಲಿ ಕೂರಿಸಿಕೊಂಡು ನೀರುಗಂಟಿಪಾಳ್ಯದ ಕಡೆಗೆ ವೇಗವಾಗಿ ಬರುತ್ತಿದ್ದರು.

ಮಾರ್ಗ ಮಧ್ಯೆ ಬಚ್ಚನಹಳ್ಳಿಗೇಟ್ ಬಳಿ ಏಕಾಏಕಿ ಎಡ ತಿರುವು ತೆಗೆದುಕೊಳ್ಳುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದು ಹಿಂದೆ ಕುಳಿತಿದ್ದ ಮೋಹನ್ ಅವರು ಸ್ಥಳದಲ್ಲೇ ಮೃತಪಟ್ಟರೆ ಮಂಜುನಾಥ್ ಗಂಭೀರವಾಗಿ ಗಾಯಗೊಂಡರು.

ತಕ್ಷಣವೇ ಅವರನ್ನು ಪ್ರೋಲೈಫ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ದೇವನಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಡಿಸಿಪಿ ರೇಣುಕಾ ಅವರು ತಿಳಿಸಿದ್ದಾರೆ.

Comments are closed.