ಚಿಕ್ಕೋಡಿ,ಜು. ೧೩ – ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ತಾಲೂಕಿನಾದ್ಯಂತ ಉಪವಿಭಾಗಾಧಿಕಾರಿ ಗೀತಾ ಕೌಜಲಗಿ ತೀವ್ರ ಕಟ್ಟೆಚ್ಚರಕ್ಕೆ ಘೋಷಣೆ ಮಾಡಿದ್ದಾರೆ.
ಕಳೆದೆರಡು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಇಂದು ಹಿಪ್ಪರಗಿ ಡ್ಯಾಂ ನಲ್ಲಿ 2.058 ಸಾವಿರ ಕ್ಯೂಸೆಕ್ಸ್ ನೀರು ಹೊರಹರಿವು ಇದ್ದು, ಅಷ್ಟೇ ಪ್ರಮಾಣದಲ್ಲಿ ಕೃಷ್ಣಾ ನದಿಗೆ ಹರಿದು ಬರುತ್ತಿದೆ.
ತಾಲೂಕಿನ ಕೃಷ್ಣಾ,ವೇದಗಂಗಾ,ದೂದಗಂಗಾ, ನದಿಗಳಿಗೆ ನೀರಿನ ಮಟ್ಟ ಅಪಾಯದ ಹಂತ ತಲುಪಿದ್ದು ನದಿ ತೀರದ ಗ್ರಾಮಸ್ಥರಿಗೆ ಬೇರೆಡೆ ತೆರಳಲು ಸೂಚನೆ ನೀಡಿರುವ ಉಪವಿಭಾಗಾಧಿಕಾರಿ ಗೀತಾ ಕೌಜಲಗಿ ಅವರು ತಾಲೂಕಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಸಂಜೆಯವರೆಗೆ ಕಾರವಾರದಿಂದ 15 ಬೋಟುಗಳನ್ನು ತರಿಸಲಾಗುವುದೆಂದು ತಿಳಿಸಿದ್ದಾರೆ.
ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜತ್ರಾಟ-ಭೀವಸಿ, ಅಕ್ಕೋಳ-ಸಿದ್ನಾಳ, ಬೋಜವಾಡಿ-ಕುಣ್ಣೂರು, ದೂದಗಂಗಾ ನದಿಯ ಮಲ್ಲಿಕವಾಡ-ದತ್ತವಾಡ, ಸದಲಗಾ-ಬೋರಗಾಂವ ಸೇರಿದಂತೆ ಈಗಾಗಲೇ ತಾಲೂಕಿನ 7 ಸೇತುವೆಗಳು ಮುಳುಗಡೆ ಹೊಂದಿವೆ.ಕಲ್ಲೋಳ-ಯಡೂರು ಸೇರಿದಂತೆ ತಾಲೂಕಿನ 5 ಬಾಂಧಾರಗಳು ಸಂಪೂರ್ಣ ಜಲಾವೃತಗೊಂಡಿವೆ. ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಭಾಗಶಃ ನೀರಿನಲ್ಲಿ ಮುಳುಗಡೆಯಾಗಿದೆ.
ಜನಸಂಪರ್ಕ ಕಡಿತಗೊಂಡಿದೆ. ವಾಹನ ಸಂಚಾರಕ್ಕಾಗಿ ಜನರು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಹೆಣಗಾಡುವಂತಹ ಪರಿಸ್ಥಿತಿ ಬಂದೊದಗಿದೆ.
ಮೂಡಲಗಿ ಬಳಿಯ ಘಟಪ್ರಭಾ ನದಿಯಲ್ಲಿ ಲಾರಿಯೊಂದು ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಸಂಚರಿಸುವಾಗ ಕೊಚ್ಚಿ ಹೋಗಿದೆ. ಇಂದೂ ಕೂಡಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಡಳಿತ ನದಿ ತೀರದ ಜನರನ್ನು ಸಾಗಿಸಲು ಹರಸಾಹಸ ಪಡುತ್ತಿದ್ದು ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಎಮ್.ಜಯರಾಮ ಇಂದು ಮಧ್ಯಾಹ್ನ ಪ್ರವಾಹಪೀಡಿತ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
ತಾಲೂಕಿನ ಜನತೆ, ಜಾನುವಾರು ಅಗತ್ಯ ಸರಂಜಾಮುಗಳೊಂದಿಗೆ ಮಕ್ಕಳು, ಮರಿಗಳನ್ನು ಕಟ್ಟಿಕೊಂಡು, ಗ್ರಾಮಗಳನ್ನು ತೊರೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಭೀಕರ ಪ್ರವಾಹ ಪರಿಸ್ಥಿತಿಯನ್ನು ಸದ್ಯ ಚಿಕ್ಕೋಡಿ ತಾಲೂಕು ಎದುರಿಸುತ್ತಿದೆ.
Comments are closed.