ಬೆಂಗಳೂರು, ಜು. ೧೩ – ರಾಜ್ಯಪಾಲ ವಜುಭಾಯಿ ವಾಲಾ ಅವರು ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವ ಹಿನ್ನಲೆಯಲ್ಲಿ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರನ್ನು ಆರೋಪಿಯಾಗಿಸಿ ವಿಚಾರಣೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳು ಮುಂದಾಗಿದ್ದಾರೆ.
ವಿಚಾರಣೆಯಲ್ಲಿ ನ್ಯಾ.ಭಾಸ್ಕರ್ ರಾವ್ ಅವರು ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಬಂಧಿಸಲಾಗುವುದು ಎಂದು ಎಸ್‌ಐಟಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧ ಬಂಧಿಸಲಾಗಿರುವ ಭಾಸ್ಕರ್‌ರಾವ್ ಅವರ ಪುತ್ರ ಅಶ್ವಿನ್ ಜಂಟಿ ಆಯುಕ್ತ ರಿಯಾಜ್ ಅವರು ನೀಡಿರುವ ಲಂಚ ಪಡೆದ ಹೇಳಿಕೆಗಳನ್ನು ಆಧರಿಸಿ ಭಾಸ್ಕರ್‌ರಾವ್ ಅವರಿಂದ ಕೆಲವು ಮಾಹಿತಿಗಳು ಹಾಗೂ ಸ್ಪಷ್ಟನೆಗಳನ್ನು ಪಡೆದುಕೊಳ್ಳಲಾಗಿತ್ತು.
ಆದರೆ ರಾಜ್ಯಪಾಲರ ಅನುಮತಿ ಅಗತ್ಯವಿದ್ದರಿಂದ ಭಾಸ್ಕರ್‌ರಾವ್ ಅವರನ್ನು ಆರೋಪಿಯನ್ನಾಗಿಸಿ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ ಇದರಿಂದಾಗಿ ಎಸ್‌ಐಟಿ ಅಧಿಕಾರಿಗಳು ಭಾಸ್ಕರರಾವ್ ಅವರನ್ನು ಆರೋಪಿಯಾಗಿಸಲು ಅನುಮತಿ ನೀಡುವಂತೆ ಕೋರಿ ವಿಶೇಷ ತನಿಖಾ ತಂಡ ಸರಕಾರಕ್ಕೆ ಪತ್ರ ಬರೆದಿತ್ತು.ಈ ಪತ್ರವನ್ನು ಪರಿಶೀಲಿಸಿದ್ದ ಗೃಹ ಇಲಾಖೆ ನಿರ್ಧಾರ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಪತ್ರ ರವಾನಿಸಿತ್ತು.ಈಗ ರಾಜ್ಯಪಾಲರು ಭಾಸ್ಕರ್ ರಾವ್ ಅವರನ್ನು ಪ್ರಕರಣದಲ್ಲಿ ಆರೋಪಿಯಾಗಿಸಲು ಅನುಮತಿ ನೀಡಿರುವುದರಿಂದ ಭಾಸ್ಕರ್ ರಾವ್‌ಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.
ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕೃಷ್ಣಮೂರ್ತಿಯಿಂದ ಒಂದು ಕೋಟಿ ರೂ.ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಭಾಸ್ಕರ್‌ರಾವ್ ಆರೋಪಿಯಾಗಲಿದ್ದಾರೆ. ಮೊದಲು ತನಿಖಾ ತಂಡ ಭಾಸ್ಕರ್ ರಾವ್ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿತ್ತು.ಆದರೆ ತನಿಖೆ ಸಂದರ್ಭದಲ್ಲಿ ಅವರ ಮೇಲಿನ ಆರೋಪಗಳಿಗೆ ಸಾಕ್ಷಿ ಸಿಕ್ಕಿರುವ ಹಿನ್ನೆಲೆಯಲ್ಲಿ ಆರೋಪಿಯನ್ನಾಗಿ ಮಾಡಲು ಎಸ್‌ಐಟಿ ನಿರ್ಧರಿತ್ತು.
ಪ್ರಕರಣಕ್ಕೆ ಸಂಬಂಧಿಸಿಂತೆ ತನಿಖೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ೧೫೪೫ ಪುಟಗಳ ವಿಸೃತ ಚಾರ್ಜ್‌ಶೀಟ್ ಸಲ್ಲಿಸಿದ್ದರು. ೧೫೯ ಸಾಕ್ಷ್ಯಗಳು ಮತ್ತು ೨೯ ಸಾಕ್ಷಿದಾರರ ಹೇಳಿಕೆಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ೨೯ ಸಾಕ್ಷಿಗಳ ಪೈಕಿ ನಿವೃತ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಕೂಡ ಒಬ್ಬರಾಗಿದ್ದರು. ಈಗ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಇನ್ನು ಮುಂದೆ ಆರೋಪಿಯಾಗಲಿದ್ದಾರೆ.
ಈ ಪ್ರಕರಣದಲ್ಲಿ ಲೋಕಾಯುಕ್ತ ಮಾಜಿ ಜಂಟಿ ಆಯುಕ್ತ ಸೈಯದ್ ರಿಯಾಜ್, ಅಶೋಕ್ ಕುಮಾರ್, ನ್ಯಾ.ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್, ಭಾಸ್ಕರ್, ಶಂಕರೇಗೌಡ ಮತ್ತು ಶ್ರೀನಿವಾಸಗೌಡ ಆರೋಪಿಗಳಾಗಿದ್ದಾರೆ.
ಲಂಚದ ಹಣದ ಮಾತುಕತೆ ನಡೆಸಲು ಲೋಕಾ ಕಚೇರಿ, ಸಿಬ್ಬಂದಿ, ಲೋಕಾಯುಕ್ತರ ಅಧಿಕೃತ ನಿವಾಸವನ್ನು ಬಳಸಿಕೊಳ್ಳಲಾಗಿತ್ತು. ಅಧಿಕಾರಿಗಳಿಂದ ಅಶ್ವಿನ್ ರಾವ್ ಮತ್ತು ಆತನ ಸಹಚರರು ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ಭಾಸ್ಕರ್ ರಾವ್ ಅವರಿಗೆ ಗೊತ್ತಿದ್ದರೂ ಸುಮ್ಮನಿದ್ದು ಸಹಕಾರ ನೀಡಿದ್ದರು. ಭಾಸ್ಕರ್ ರಾವ್ ಲೋಕಾಯುಕ್ತರಾಗಿ ಕೆಲಸ ಮಾಡುತ್ತಿದ್ದುದನ್ನು ದುರುಪಯೋಗಪಡಿಸಿಕೊಂಡಿದ್ದ ಪುತ್ರ ಅಶ್ವಿನ್ ರಾವ್ ದೂರುದಾರ ಎಂಜಿನಿಯರ್ ಕೃಷ್ಣಮೂರ್ತಿ ಅವರನ್ನು ಲೋಕಾ ಕಚೇರಿಗೆ ಕರೆಸಿಕೊಂಡು ಒಂದು ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಕೃಷ್ಣಮೂರ್ತಿ ಅಂದಿನ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರಿಗೆ ದೂರು ನೀಡಿದ್ದರು.
Comments are closed.