ಕರ್ನಾಟಕ

ಥೈರಾಯ್ಡ್ ಗಡ್ಡೆಯ ಸಮಸ್ಯೆ ಹಾಗೂ ಮುನ್ಸೂಚನೆ ಬಗ್ಗೆ ಮಾಹಿತಿ

Pinterest LinkedIn Tumblr

thyroid_symptoms

ಮಂಗಳೂರು: ಗಂಟಲಿನ ಭಾಗದಲ್ಲಿ ಆಗುವ ಊತವನ್ನು ಚರ್ಮದ ಹೊರ ಭಾಗದಿಂದಲೂ ಕಾಣಬಹುದು. ನುಂಗಲು ಕಷ್ಟವಾಗುವುದು, ಧ್ವನಿ ಬದಲಾವಣೆ- ಇವೆಲ್ಲವೂ ಥೈರಾಯ್ಡ್ ಗಡ್ಡೆಯ ಸಮಸ್ಯೆಗಳು. ಈ ಗಡ್ಡೆಯು ಕ್ಯಾನ್ಸರ್ನ ಮುನ್ಸೂಚನೆಯೂ ಆಗಿರಬಹುದು. ಆದರೆ, ಎಲ್ಲ ಊತವೂ ಕ್ಯಾನ್ಸರ್ ಆಗಿರದು. ಈ ಗಡ್ಡೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಕ್ಯಾನ್ಸರ್ ಗಡ್ಡೆಯೇ ಅಥವಾ ಅಲ್ಲವೇ ಎಂಬುದನ್ನು ಪರಿಶೀಲಿಸಬಹುದು. ವಿವಿಧ ಅಧ್ಯಯನಗಳ ಪ್ರಕಾರ ಭಾರತದಲ್ಲಿ ಥೈರಾಯ್ಡ್ ಕ್ಯಾನ್ಸರ್ ಸಾಮಾನ್ಯ. ಶೇ.5 ರಿಂದ 10ರಷ್ಟು ಗಡ್ಡೆಗಳು ಕ್ಯಾನ್ಸರ್ನದ್ದಾಗಿರುತ್ತವೆ. ಆರಂಭದಲ್ಲಿಯೇ ಗುರುತಿಸಿದಲ್ಲಿ ಶಸ್ತ್ರಚಿಕಿತ್ಸೆ ಮತ್ತು ಔಷಧೋಪಚಾರ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ತೆಗೆದು ಯಶಸ್ವಿ ಚಿಕಿತ್ಸೆ ನೀಡಬಹುದು.

ಥೈರಾಯ್ಡ್ ಕ್ಯಾನ್ಸರ್ಗಳಲ್ಲಿ ನಾಲ್ಕು ವಿಧ. ಮೊದಲಿಗೆ ಪಾಪಿಲ್ಲರಿ ಥೈರಾಯ್ಡ್ ಕ್ಯಾನ್ಸರ್. ಇದು ಅತ್ಯಂತ ಸಾಮಾನ್ಯ ಥೈರಾಯ್ಡ್ ಕ್ಯಾನ್ಸರ್. ಶೇ.70-80 ಥೈರಾಯ್ಡ್ ಕ್ಯಾನ್ಸರ್ಗಳು ಈ ಮಾದರಿಯದ್ದೇ ಆಗಿರುತ್ತವೆ. ನಂತರ ಫಾಲಿಕ್ಯುಲರ್ ಥೈರಾಯ್ಡ್ ಕ್ಯಾನ್ಸರ್, ಶೇ.10-15ರಷ್ಟು ಪ್ರಮಾಣದಲ್ಲಿ ಈ ರೀತಿಯ ಕ್ಯಾನ್ಸರ್ಗಳು ಕಾಣಿಸಿಕೊಳ್ಳುತ್ತವೆ. ಮೆಡ್ಯುಲ್ಲರಿ ಥೈರಾಯ್ಡ್ ಕ್ಯಾನ್ಸರ್, ಶೇ.5-10ರಷ್ಟು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಕೊನೆಯದಾಗಿ ಅತ್ಯಂತ ಅಪರೂಪದ ಅನಾಪ್ಲಾಸ್ಟಿಕ್ ಥೈರಾಯ್ಡ್ ಕ್ಯಾನ್ಸರ್ ಶೇ.5ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಕಾಣಲು ಸಿಗುತ್ತದೆ.

ಬಹುತೇಕ ಕ್ಯಾನ್ಸರ್ ಪ್ರಕರಣಗಳಲ್ಲಿ ಆಗುವಂತೆ ಥೈರಾಯ್ಡ್ ಕ್ಯಾನ್ಸರ್ ಕೂಡ ಆರಂಭಿಕ ಹಂತದಲ್ಲಿ ನಿರ್ಲಕ್ಷ್ಯಕ್ಕೊಳಪಡುತ್ತದೆ. ಏಕೆಂದರೆ ಸಾಮಾನ್ಯ ಥೈರಾಯ್ಡ್, ಗಡ್ಡೆಯಂತೆ ಗೋಚರ ಆಗುವುದರಿಂದ ಬಹುತೇಕರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೆಚ್ಚಿನ ಥೈರಾಯ್ಡ್ ಕ್ಯಾನ್ಸರ್ಗಳು ನಿಧಾನವಾಗಿ ಬೆಳೆಯುವುದರಿಂದ ಸಂಪೂರ್ಣ ಯಶಸ್ವಿ ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಇನ್ನು ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು ಮತ್ತು ಕಡಿಮೆ ಅತಿಕ್ರಮಿಸುವಂಥ ಶಸ್ತ್ರಚಿಕಿತ್ಸೆಯ ವಿಧಾನಗಳ ಪರಿಚಯದಿಂದಾಗಿ ರೋಗಿಗಳು ಗಾಯ ಮುಕ್ತವಾಗಿ ಹಾಗೂ ಯಾವುದೇ ದೀರ್ಘಕಾಲದ ಸಮಸ್ಯೆಗಳೂ ಇಲ್ಲದಂತೆ ಚಿಕಿತ್ಸೆ ಪಡೆಯಬಹುದು. ಈ ಚಿಕಿತ್ಸಾ ವಿಧಾನಗಳನ್ನು ‘ಗಾಯ ಮುಕ್ತ ಎಂಡೊಸ್ಕೋಪಿಕ್’ ಅಥವಾ ‘ರೊಬೊಟಿಕ್ ಥೈರಾಯ್ಡೆಕ್ಟಮಿ’ ಎಂದೂ ಕರೆಯಲಾಗುತ್ತದೆ. ಹಾನಿಕಾರಕವಲ್ಲದ ಗಡ್ಡೆಗಳನ್ನು ತೆಗೆಯಲು, ಕ್ಯಾನ್ಸರ್ ಇರಬಹುದಾದಂಥ ಗಡ್ಡೆಗಳು ಮತ್ತು ನಿಖರ ಕ್ಯಾನ್ಸರ್ ಥೈರಾಯ್ಡ್ ಗಡ್ಡೆಗಳನ್ನು ತೆಗೆಯಲು ಇಂಥ ವಿಧಾನ ಸೂಕ್ತ.

ಕ್ಯಾನ್ಸರ್ ಸೇರಿದಂತೆ ಮೊದಲಾದ ಮಾರಣಾಂತಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕನಿಷ್ಠ ಅತಿಕ್ರಮಣಶೀಲ ಶಸ್ತ್ರಚಿಕಿತ್ಸೆಯು ಮಹತ್ವದ ಅನ್ವೇಷಣೆಯಾಗಿದೆ. ಈ ವಿಧಾನದಲ್ಲಿ ಹಾಗೂ ಲ್ಯಾಪ್ರೋಸ್ಕೋಪಿಕ್ ಮತ್ತು ರೊಬೊಟಿಕ್ ವಿಧಾನಗಳಲ್ಲಿ ವೈದ್ಯರಿಗೆ ರೋಗಿಯ ಅಂಗಾಂಗವನ್ನು ಕತ್ತರಿಸಿ ತೆರೆದು ಚಿಕಿತ್ಸೆ ನೀಡುವ ಅಗತ್ಯ ಇರುವುದಿಲ್ಲ. ಬದಲಾಗಿ ಅಂಗಾಂಗಗಳಲ್ಲಿ ಸಣ್ಣ ಗಾತ್ರದ ರಂಧ್ರ ಮಾಡಿ ಶಸ್ತ್ರಚಿಕಿತ್ಸೆಯ ಸಾಧನಗಳನ್ನು ಮತ್ತು ಪಿನ್ಹೋಲ್ ಕ್ಯಾಮೆರಾಗಳನ್ನು ಒಳಭಾಗಕ್ಕೆ ಕಳುಹಿಸಿ ಮಾನಿಟರ್ ಮೂಲಕ ವೀಕ್ಷಿಸುವುದರೊಂದಿಗೆ ವೈದ್ಯರು ನಿರ್ದಿಷ್ಟ ಭಾಗಗಳಿಗೆ ಚಿಕಿತ್ಸೆ ನೀಡುತ್ತಾರೆ.

ಅತ್ಯಂತ ಸಾಮಾನ್ಯ ರೀತಿಯ ಗಾಯದ ಗುರುತಾಗುವುದರ ಜತೆಗೆ ಶರೀರದ ಇತರೆ ಭಾಗಗಳಿಗೆ ಆಗುವ ತೊಂದರೆಯೂ ಕಡಿಮೆಯಾಗುತ್ತದೆ. ಈ ಶಸ್ತ್ರಚಿಕಿತ್ಸೆಯಿಂದ ಕನಿಷ್ಠ ರಕ್ತಸ್ರಾವ, ಬಹುಬೇಗನೆ ಚೇತರಿಕೆ, ಆಸ್ಪತ್ರೆಯಲ್ಲಿ ಕಡಿಮೆ ದಿನಗಳ ಶಶ್ರೂಷೆ, ಗಾಯ ಬಹುಬೇಗನೆ ವಾಸಿಯಾಗುವುದು ಮತ್ತು ವೈದ್ಯರ ಬಳಿ ಹೆಚ್ಚು ಹೋಗದಂತಾಗುವುದು- ಹೀಗೆ ಮೊದಲಾದ ಅನುಕೂಲಗಳಿವೆ. ಪ್ರಮುಖವಾಗಿ ಶಸ್ತ್ರಚಿಕಿತ್ಸೆ ನಂತರ ಉತ್ತಮ ಜೀವನ ಶೈಲಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಸಾಂಪ್ರದಾಯಿಕ ಶೈಲಿಯ ಶಸ್ತ್ರಚಿಕಿತ್ಸೆಯ ವಿಧಾನದ ಮೂಲಕ ಥೈರಾಯ್ಡ್ ಕ್ಯಾನ್ಸರ್ ಗಡ್ಡೆಗಳನ್ನು ತೆಗೆಯುವುದಕ್ಕೂ ಕನಿಷ್ಠ ಅತಿಕ್ರಮಣಶೀಲ ಶಸ್ತ್ರಚಕಿತ್ಸೆಗೆ ಸಾಕಷ್ಟು ವ್ಯತ್ಯಾಸವಿದೆ. ಈ ಅತ್ಯಾಧುನಿಕ ವಿಧಾನದ ಮೂಲಕ ಕುತ್ತಿಗೆ ಭಾಗದಲ್ಲಿ ಗಾಯದ ಯಾವುದೇ ಗುರುತುಗಳೂ ಇಲ್ಲದಂತೆ ಯಶಸ್ವಿ ಚಿಕಿತ್ಸೆ ನೀಡಲು ಸಾಧ್ಯ. ಅಲ್ಲದೆ, ಕುತ್ತಿಗೆಯನ್ನು ಸರಾಗವಾಗಿ ಆಡಿಸಲೂ ಸಾಧ್ಯವಾಗುತ್ತದೆ. ಅಲ್ಲದೆ ಆಹಾರ ಪದಾರ್ಥಗಳನ್ನು ನುಂಗುವಾಗ ಯಾವುದೇ ತೊಂದರೆ ಆಗದು. ರೋಗಿಯು ಬಹುಬೇಗನೆ ತಮ್ಮ ದೈನಂದಿನ ಜೀವನಕ್ಕೆ ಮರಳಲು ಸಾಧ್ಯವಾಗುತ್ತದೆ. ಗಂಟಲು ಕತ್ತರಿಸುತ್ತಾರೆಂಬ ಭಯವೂ ಭೀತಿಯೂ ರೋಗಿಗೆ ಇರುವುದಿಲ್ಲ. ಥೈರಾಯ್ಡ್ ಶಸ್ತ್ರಚಿಕಿತ್ಸೆಯ ಜಟಿಲತೆ ಮತ್ತು ಕಾಸ್ಮೆಟಿಕ್ ಸವಾಲುಗಳನ್ನು ಮನಗಂಡಲ್ಲಿ ಕನಿಷ್ಠ ಅತಿಕ್ರಮಣಶೀಲ ಶಸ್ತ್ರಚಿಕಿತ್ಸಾ ವಿಧಾನವು ಅತ್ಯಂತ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ.

Comments are closed.