ಕರ್ನಾಟಕ

ಲಾಲಸೆಯಿಂದ ದೂರ – ಜನಸೇವೆಗೆ ಹತ್ತಿರ

Pinterest LinkedIn Tumblr

bjpಬೆಂಗಳೂರು, ಜು. ೧೧- ಹಣ, ಅಧಿಕಾರಕ್ಕೆ ತಾವು ಎಂದೂ ಬೆನ್ನು ಬಿದ್ದಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ಸಚಿವನಾಗುವ ಆಕಾಂಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಪ್ರಧಾನಿ ನರೇಂದ್ರಮೋದಿಯವರು ತಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ್ದಾರೆ. ಪಕ್ಷ ಹಾಗೂ ಮುಖಂಡರಿಗೆ ಒಳ್ಳೆಯ ಹೆಸರು ತರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ರಮೇಶ್ ಜಿಗಜಿಣಗಿ ಅವರು ಹೇಳಿದರು.

ಕೇಂದ್ರ ಸಚಿವ ಸಂಪುಟ ಸೇರ್ಪೆಡೆಯಾದ ನಂತರ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸ್ಥಾನಮಾನ ನೀಡುವ ಮೂಲಕ ತಮಗೆ ಅನ್ಯಾಯ ಮಾಡಲಾಗಿದೆ ಎಂಬ ವರದಿಗಳನ್ನು ತಳ್ಳಿ ಹಾಕಿ ಪ್ರಧಾನಿ ಮೋದಿಯವರು ಒಳ್ಳೆಯ ಖಾತೆ ನೀಡಿದ್ದಾರೆ. ಒಳ್ಳೆಯ ಕೆಲಸ ಮಾಡಿದರೆ ಅವರು ಗುರುತಿಸುತ್ತಾರೆ ಎಂದರು.

ಕೇಂದ್ರದ ಸಚಿವ ಸಂಪುಟದಲ್ಲಿ ನೈರ್ಮಲೀಕರಣ ಮತ್ತು ಗ್ರಾಮೀಣ ಕುಡಿಯುವ ನೀರಿನ ರಾಜ್ಯ ಸಚಿವನಾಗಿ ಮೊದಲು ಇಲಾಖೆಯ ಬಗ್ಗೆ ಅಧ್ಯಯನ ನಡೆಸಿ ನಂತರ ವಿವರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತೇನೆ ಎಂದು ಅವರು ಇಲಾಖಾ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿಗೆ ಮಾತನಾಡಲು ಬಯಸಲಿಲ್ಲ.
ಗ್ರಾಮೀಣ ಭಾಗದಲ್ಲಿ ಶೌಚಾಲಯಗಳು ಯಶಸ್ವಿಯಾಗದಿರುವುದಕ್ಕೆ ನೀರಿನ ಕೊರತೆ ಕಾರಣ ಎಂಬುದು ತಮ್ಮ ಗಮನಕ್ಕೆ ಬಂದಿದೆ. ನೀರಿಲ್ಲದೆ ಬಳಸುವ ಶೌಚಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆ. ಕೆನಡಾದಲ್ಲಿ ಈ ತಂತ್ರಜ್ಞಾನ ಬಳಕೆಯಲ್ಲಿದೆ ಎಂಬ ಮಾಹಿತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ದೇಶದಲ್ಲೂ ಈ ರೀತಿಯ ತಂತ್ರಜ್ಞಾನ ಬಳಕೆಗೆ ಒತ್ತು ನೀಡುವುದಾಗಿ ಅವರು ಹೇಳಿದರು.
ನನ್ನ ಹುಟ್ಟೂರಿನಲ್ಲೆ ಜನ ಶೌಚಾಲಯ ಬಳಸುತ್ತಿಲ್ಲ. ಶೌಚಾಲಯ ಕಟ್ಟಿದರೂ ಅದನ್ನು ಕಟ್ಟಿಗೆ ತುಂಬಲು ಬಳಸುತ್ತಿದ್ದಾರೆ. ಎಲ್ಲರೂ ಶೌಚಾಲಯಕ್ಕೆ ಬಯಲನ್ನೆ ಆಶ್ರಯಿಸಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ನೀರಿನ ಕೊರತೆ ಎಂದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಇರುವುದು ನನಗೂ ಗೊತ್ತಿದೆ. ಹೊಸದಾಗಿ ಸಚಿವನಾಗಿದ್ದೇನೆ. ಎಲ್ಲವನ್ನೂ ಆಳವಾಗಿ ಅಧ್ಯಯನ ಮಾಡಿ ನಂತರ ಈ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತೇನೆ ಎಂದು ಸಚಿವ ರಮೇಶ್ ಜಿಗಜಿಣಗಿ ಹೇಳಿದರು.
ಸ್ವಚ್ಚ ಭಾರತ್ ಅಭಿಯಾನ ವಿಫಲವಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಟೀಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು, ಸಿದ್ದರಾಮಯ್ಯನವರು ಯಾವ ದೃಷ್ಠಿಕೋನದಿಂದ ಈ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ಸ್ವಚ್ಚ ಭಾರತ್ ಅಭಿಯಾನ ಪ್ರಧಾನಿ ಮೋದಿ ಅಥವಾ ಕೇಂದ್ರ ಸಚಿವರಿಂದ ಸಾಧ್ಯವಿಲ್ಲ, ಜನರ ಸಹಕಾರ ಬೇಕು. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಇದನ್ನು ಹೇಳಿರಲೇ ಇಲ್ಲ. ಈಗಲಾದರೂ ಆ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಎಲ್ಲರ ಸಹಕಾರ ಸಿಕ್ಕರೆ ಮಾತ್ರ ಸ್ವಚ್ಚ ಭಾರತ ಯಶಸ್ವಿಯಾಗಲು ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಿ.ನಾ.ರಾಮು, ತಮ್ಮೇಶ್‌ಗೌಡ, ಅಬ್ದುಲ್ ಅಜೀಂ ಉಪಸ್ಥಿತರಿದ್ದರು.

Comments are closed.