ಕರ್ನಾಟಕ

ಮುಂಗಾರು ಮಳೆಗೆ ಮುಳುಗಿದ ಬೆಳಗಾವಿ !

Pinterest LinkedIn Tumblr

bel

ಬೆಳಗಾವಿ: ಸ್ಮಾರ್ಟ್ ಸಿಟಿಗೆ ಭಾಜನವಾಗಿರುವ ಬೆಳಗಾವಿ ನಗರದ ಅರ್ಧ ಭಾಗ ಇಂದು ಮುಳುಗಿ ಹೋಗಿ ಜನರು ಬೀದಿ ಪಾಲಾಗಿದ್ದಾರೆ. ನಿನ್ನೆ ಇಡೀ ರಾತ್ರಿ ಸುರಿದ ಮಳೆಯಿಂದ ಬೆಳಗಿನ ಹೊತ್ತಿಗೆ ನಗರದ ಅರ್ಧ ಭಾಗ ಅಕ್ಷರಶಃ ಮುಳುಗಿ ಹೋಗಿದ್ದು ಜನತೆ ಪರದಾಡುತ್ತಿದ್ದಾರೆ. ಗೋವಾವೆಸ್, ಶಾಸ್ತ್ರೀನಗರ, ಶಿವಾಜಿ ಗಾರ್ಡನ್ ಮೂಲಕ ಹರಿದು ಹೋಗುವ ನಾಲೆ ಎಲ್ಲೆಂದರಲ್ಲಿ ಉಕ್ಕಿ ಒಡೆದು ವಸತಿ ಪ್ರದೆಶಗಳಲ್ಲಿ ನುಗ್ಗಿ ಜನತೆ ನೀರಲ್ಲಿ ನಿಂತಿದ್ದಾರೆ.

ದ್ವೀಪವಾದ ಶಾಸ್ತ್ರಿನಗರ: ಇಡೀ ಶಾಸ್ತ್ರೀನಗರ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದ್ದು ರಸ್ತೆಗಳು ಮನೆಗಳು ಜಲಾವೃತವಾಗಿವೆ. ಈ ಹಿಂದೆ ಭಾರಿ ಮಳೆ ಸುರಿದು ತಲ್ಲಣ ಮೂಡಿಸಿದ್ದ ತಮಿಳುನಾಡಿನ ಚೆನ್ನೈ ನಗರದಲ್ಲಿ ಉಂಟಾದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಸಿಹಿ ನಿದ್ದೆಯಲ್ಲಿದ್ದ ಜನರು ನುಗ್ಗಿದ ನೀರಿನ ಪ್ರವಾಹದಿಂದ ಬೆಚ್ಚಿ ಬಿದ್ದಿದ್ದಾರೆ. ತುಂಬಿ ಹೋದ ಶಿವಾಜಿ ಗಾರ್ಡನ್: ಕಪಿಲೇಶ್ವರ ಮಂದಿರ ದಿಂದ ಹಿಡಿದು ಸುತ್ತಮುತ್ತಲ ಎಲ್ಲಾ ಪ್ರದೇಶಗಳು ದ್ವೀಪವಾಗಿ ಪರಿವರ್ತನೆಗೊಂಡಿವೆ. ಜನತೆ ಬೀದಿಗೆ ಬಂದು ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ನಾಲೆ ಒಡೆದು ಶಿವಾಜಿ ಉದ್ಯಾನದ ತುಂಬ ಹರಡಿಕೊಂಡಿದೆ.

ಮುಂದೆ ಸಾಗದ ಬಳ್ಳಾರಿ ನಾಲಾ: ಹಲವಾರು ವರ್ಷಗಳಿಂದ ಬಳ್ಳಾರಿ ನಾಲಾ ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡ ಬೇಕಾಗಿದ್ದ ಆಡಳಿತ ಮತ್ತು ಜನಪ್ರತಿನಿಧಿಗಳ ಧೋರಣೆಯಿಂದ ಒಂದೇ ರಾತ್ರಿಯಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಮ್ಮ ದಿನನಿತ್ಯದ ಅಗತ್ಯ ವಸ್ತುಗಳು, ಆಹಾರ ಧಾನ್ಯಗಳು, ಹಾಸಿಗೆ ಹೊದಿಕೆ, ಬಟ್ಟೆಬರೆ, ಫರ್ನಿಚರ್ಸ್ಜ, ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳೆದುಕೊಂಡು ನಾಗರಿಕರು ಚಿಂತಾಕ್ರಾಂತರಾಗಿದ್ದಾರೆ. ಮನೆ ಯೊಳಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ರಸ್ತೆಗಳೆಲ್ಲ ಕೊಳಚೆಮಯ: ಭಾರಿ ಮಳೆಯಿಂದ ಒಳ ಚೆರಂಡಿ ನೀರು ರಸ್ತೆ ಯುದ್ದಕ್ಕೂ ಹರಿದು ಇಡೀ ನಗರದ ತುಂಬೆಲ್ಲಾ ಗಬ್ಬು ವಾಸನೆ ಹರಡಿದ್ದು ಸಾಂಕ್ರಾಮಿಕ ರೋಗಗಳ ಭೀತಿ ಉಂಟಾ ಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಮಳೆಯಿಂದ ಭಾಗಶಃ ನಗರ ಮುಳಗಿ ಹೋಗಿದ್ದು ನಾಗರಿಕರು ಪರಿತಪಿಸುತ್ತಿದ್ದರೂ, ಪಾಲಿಕೆ ಅಧಿಕಾರಿಗಳು ಮಾತ್ರ ತಮಗೆ ಏನು ಗೊತ್ತಿಲ್ಲದಂತೆ ಇರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾಡಳಿತವು ಸಹ ಮನ ವಾಗಿದ್ದು ಯಾವೊಬ್ಬ ಅಧಿಕಾರಿಗಳು ಸಂತ್ರಸ್ಥರನ್ನು ಭೇಟಿಯಾಗದಿರುವ ಬಗ್ಗೆ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಶಾಸ್ತ್ರೀನಗರ, ಹುಲಬತ್ತಿ ಕಾಲನಿ, ಮಹಾದ್ವಾರ ರೋಡ್, ಕಪಿಲೇಶ್ವರ ಕಾಲನಿ, ಹೊಸೂರಮಠ ಗಲ್ಲಿ, ಓಂಕಾರ ನಗರ, ಕಾಂಗ್ರೆಸ್ ರಸ್ತೆ, ರೈಲ್ವೇ ಓವರ್ ಬ್ರಿಡ್ಜ್ ಸುತ್ತಲ ಪ್ರದೇಶ, ಖಾಸಭಾಗ, ವಡಗಾಂವ, ಅನಗೋಳ ಪ್ರದೇಶಗಳು ಜಲಾವೃತ್ತವಾಗಿವೆ.

Comments are closed.