ಬೆಂಗಳೂರು: ಕಮ್ಮನಹಳ್ಳಿಯ ಡಾ. ರಾಜ್ ಕುಮಾರ್ ಉದ್ಯಾನವನದ ಬಳಿ ಬೈಕ್‌ಗೆ ಅಡ್ಡ ಬಂದ ನಾಯಿಯ ಜೀವ ಉಳಿಸಲು ಹೋಗಿ ಸುರೇಶ್ (45) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರು ಹೊಸಕೋಟೆಯಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಬುಧವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಅವಘಡ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಸುರೇಶ್ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಾಣಸವಾಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಂಜಿನಿಯರ್ ಸಾವು: ರಸ್ತೆಯ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರರೊಬ್ಬರು ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆ
ವ್ಯಾಪ್ತಿಯಲ್ಲಿ ನಡೆದಿದೆ. ದಿಣ್ಣೂರಿನ ನಿವಾಸಿ ಇಂಜಿನಿಯರ್ ನಂಬಿರಾಜನ್ (23) ಮೃತ ದುರ್ದೈವಿ. ಮೂಲತಃ ತಮಿಳುನಾಡಿನವರಾದ ಈತ ಏರ್‌ಬಸ್ ಡಿಸೈನರ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದು, ದಿಣ್ಣೂರಿನಲ್ಲಿ ವಾಸವಿದ್ದರು. ಮಹದೇವಪುರದ ರಿಂಗ್ ರಸ್ತೆಯ ನಾಗಾರ್ಜುನ ಅಪಾರ್ಟ್‌ಮೆಂಟ್ ಬಳಿ ಮನೆಗೆ ಹೋಗುತ್ತಿದ್ದಾಗ ರಾತ್ರಿ 12ರ ವೇಳೆ ಆಯತಪ್ಪಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು
ತಿಳಿಸಿದರು. ಅಪಘಾತ ಸಂಭವಿಸಿದ ವೇಳೆ ನಂಬಿರಾಜನ್ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ
ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಂಪೈರ್ ಕೆಲಸಗಾರ ಸಾವು
ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಚಿನ್ನಸ್ವಾಮಿ ಸ್ಟೇಡಿಯಂನ 9ನೇ ಗೇಟ್ ಬಳಿ ಸಂಭವಿಸಿದೆ. ಮತ್ತಿಕೆರೆ ನಿವಾಸಿ ಸಾಯಿಭರತ್ (22) ಮೃತ ಯುವಕ. ಈತ ನಗರದ ಚರ್ಚ್ ರಸ್ತೆ ಬಳಿ ಇರುವ ಎಂಪೈರ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಮುಂಜಾನೆ ಕೆಲಸಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಅಪಘಾತವೆಸಗಿದ ಚಾಲಕ ವಾಹನ ಸಮೇತ ಪರಾರಿಯಾಗಿದ್ದು, ಆ ಬಗ್ಗೆ ನಿಖರ ಮಾಹಿತಿ ಇಲ್ಲ. ಘಟನೆ ನಡೆದ ಸುತ್ತಮುತ್ತಲಿನ ವೃತ್ತಗಳಲ್ಲಿರುವ ಸಿಸಿಟೀವಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
-ಉದಯವಾಣಿ
Comments are closed.