ಬೆಂಗಳೂರು, ಜು. ೭ – ನೂರು ವರ್ಷದ ಇತಿಹಾಸ ಹೊಂದಿರುವ ನಗರದ ಮಠದ ಹಳ್ಳಿಯ ಸರ್ಕಾರಿ ಶಾಲೆಯ ಜಾಗ ರಕ್ಷಣಾ ಇಲಾಖೆಯ ಕೈವಶವಾಗಿ ಅತಂತ್ರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳ ನೆರವಿಗೆ ಕೇಂದ್ರದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಬಂದಿದ್ದು, ಈ ಶಾಲೆಯ ಜಾಗವನ್ನು ರಾಜ್ಯ ಸರ್ಕಾರಕ್ಕೆ ಮರಳಿಸುವಂತೆ ಇಲ್ಲವೆ, ದೀರ್ಘಾವಧಿ ಗುತ್ತಿಗೆ ನೀಡುವಂತೆ ರಕ್ಷಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ರಕ್ಷಣೆ ಇಲಾಖೆಗೆ ಸೇರಿದ್ದ ಜಮೀನುಗಳ ವ್ಯಾಜ್ಯ ಪರಿಹಾರ ಸಂಬಂಧ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಾಗರಿಕರ ಅಹವಾಲು ಆಲಿಕೆ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವರು ಸರ್ಕಾರಿ ಶಾಲೆಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನ್ಯಾಯಾಲಯದ ಆದೇಶದಂತೆ ಈ ಜಮೀನು ರಕ್ಷಣಾ ಇಲಾಖೆಯ ವಶಕ್ಕೆ ಬಂದಿದ್ದರೂ ಈ ಜಾಗದಲ್ಲಿ ಶಾಲೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು, ಹಾಗಾಗಿ ಇದರ ಬದಲು ಬೇರೆ ಜಮೀನು ಪಡೆದು ರಾಜ್ಯ ಸರ್ಕಾರಕ್ಕೆ ಜಮೀನನ್ನು ಬಿಟ್ಟುಕೊಡಿ, ಅದು ಸಾಧ್ಯವಾಗದಿದ್ದರೆ ದೀರ್ಘಾವಧಿ ಗುತ್ತಿಗೆ ನೀಡಲು ಕ್ರಮ ಕೈಗೊಳ್ಳಿ ಎಂದು ಮನೋಹರ್ ಪಾರಿಕ್ಕರ್ ಹೇಳಿದರು.
ಕೇಂದ್ರದ ಸಾಂಖ್ಯಿಕ ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಸಚಿವ ಸದಾನಂದಗೌಡ ಅವರು, ಸರ್ಕಾರಿ ಶಾಲೆಯ ಜಾಗದ ಸಮಸ್ಯೆಯನ್ನು ಕೇಂದ್ರದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರ ಗಮನಕ್ಕೆ ತಂದಿದ್ದರು. ಅದರಂತೆ ಈ ವ್ಯಾಜ್ಯ ಪರಿಹಾರದ ಸಂಬಂಧ ಇಂದು ಕಬ್ಬನ್ ರಸ್ತೆಯಲ್ಲಿರುವ ಎಚ್ಎಎಲ್ ಪ್ರಧಾನ ಕಚೇರಿಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಕೆಲವೆಡೆ ರಸ್ತೆ ಮತ್ತಿತರ ಸಾರ್ವಜನಿಕ ಉದ್ದೇಶಗಳಿಗೆ ರಕ್ಷಣಾ ಇಲಾಖೆಯ ಭೂಮಿ ಅಗತ್ಯವಿರುವುದನ್ನು ಕೇಂದ್ರ ರಕ್ಷಣಾ ಸಚಿವರ ಗಮನಕ್ಕೂ ತರಲಾಗಿದ್ದು, ಆದಷ್ಟು ಬೇಗ ಈ ಜಾಗಗಳನ್ನು ಬಿಬಿಎಂಪಿಗೆ ನೀಡುವ ಮೂಲಕ ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಅನುವು ಮಾಡಿಕೊಡುವಂತೆಯೂ ಮನವಿ ಮಾಡಲಾಯಿತು.
ಈ ಜಾಗಗಳನ್ನು ರಕ್ಷಣಾ ಇಲಾಖೆ ನೀಡಿದರೆ ರಾಜ್ಯ ಸರ್ಕಾರ ಬೇರೆಡೆ ಭೂಮಿಯನ್ನು ನೀಡಲು ಸಿದ್ಧವಿರುವುದನ್ನು ಸಚಿವರ ಗಮನಕ್ಕೆ ತರಲಾಯಿತು.
ಸುಮಾರು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಕ್ಷಣಾ ಇಲಾಖೆಯ ಜಾಗದ ವ್ಯಾಜ್ಯಗಳ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ನಾಗರಿಕರು ಸಚಿವರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ನೆರವು ನೀಡುವಂತೆ ಮನವಿ ಮಾಡಿದರು.
ಇಂದಿನ ಸಭೆಯಲ್ಲಿ ಕೇಂದ್ರದ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದಗೌಡ ಅವರು, ಶಾಸಕರುಗಳಾದ ಆರ್. ಅಶೋಕ್, ಮುನಿರಾಜು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡರು.
Comments are closed.