
ಅಬುಧಾಬಿಯಲ್ಲಿ ಎಚ್ ಆರ್ ಆಗಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಮಹಿಳೆಯೊಬ್ಬಳು ಶಾರ್ಜಾದಲ್ಲಿ ಟ್ಯಾಕ್ಸಿವೊಂದರ (ಕಾರಿನ) ಟಯರ್ ಸಿಡಿದ ವೇಳೆ ನಡೆದ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾಳೆ.
ಸಾವನ್ನಪ್ಪಿದ ಮಹಿಳೆಯನ್ನು ಸವಿತಾ ತಿರುಮಲೇಶ್(40) ಎಂದು ಗುರುತಿಸಲಾಗಿದೆ. ಸವಿತಾ ತಿರುಮಲೇಶ್ ಪ್ರತಿ ಗುರುವಾರ ಶಾರ್ಜಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದು ಹೋಗುತ್ತಿದ್ದರು. ಗುರುವಾರದಂದು ಅಬುಧಾಬಿಯಿಂದ ಇತರ ಮೂವರು ಪ್ರಯಾಣಿಕರೊಂದಿಗೆ ಶಾರ್ಜಾಕ್ಕೆ ಆಗಮಿಸುತ್ತಿದ್ದರು. ಕಾರಿನ ಮುಂದಿನ ಟಯರ್ ಸಿಡಿದ ಪರಿಣಾಮ ಸವಿತಾ ತಿರುಮಲೇಶ್ ಸಾವನ್ನಪ್ಪಿದ್ದಾರೆ. ಹಿಂದಿದ್ದ ಮೂವರು ಹಾಗೂ ಚಾಲಕ ಗಾಯಗೊಂಡಿದ್ದಾರೆ.
ಸವಿತಾ ತಿರುಮಲೇಶ್ ಅಬುಧಾಬಿ ನ್ಯಾಷನಲ್ ಹೋಟೆಲ್ಸ್ ನಲ್ಲಿ ಎಚ್ ಆರ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಪತಿ ಹಾಗೂ 13 ವರ್ಷದ ಮಗ ಬೆಂಗಳೂರಿನಲ್ಲಿದ್ದು, ಅವರನ್ನು ಕೆಲಸಕ್ಕಾಗಿ ಅಬುಧಾಬಿಗೆ ಕರೆದುಕೊಂಡು ಬರಲು ಹಲವುಸಲ ಪ್ರಯತ್ನಪಟ್ಟರು ಅದು ಫಲ ನೀಡಲಿಲ್ಲ. ಈ ಕಾರಣದಿಂದ ಸವಿತಾ ಅಬುಧಾಬಿಯಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ವಾಪಾಸು ಹೋಗಲು ನಿರ್ಧರಿಸಿದ್ದರು. ಆದರೆ ವಿಧಿಯ ಆಟವೇ ಬೇರೆ ಇತ್ತು. ಅವರು ಬೆಂಗಳೂರು ಹೋಗುವ ಮುಂಚೆಯೇ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
ಸವಿತಾ ತಿರುಮಲೇಶ್ ಅವರು ಒಳ್ಳೆಯ ತ್ರೋ ಬಾಲ್ ಆಟಗಾರ್ತಿಯಾಗಿದ್ದು, ಅಬುಧಾಬಿ ಕರ್ನಾಟಕ ಸಂಘದ ಪರವಾಗಿ ಆಡುತ್ತಿದ್ದರು. ಅವರ ಅಗಲಿಕೆಗಾಗಿ ಅಬುಧಾಬಿ ಕರ್ನಾಟಕ ಸಂಘ ಕಂಬನಿ ಮಿಡಿದಿದೆ.
Comments are closed.