ಕರ್ನಾಟಕ

ಸರ್ಕಾರಿ ಶಾಲೆಗಳಿಗೆ ಬೀಗ: ಜನಾಂದೋಲನ ಪ್ರತಿಭಟನೆ

Pinterest LinkedIn Tumblr

janaಬೆಂಗಳೂರು, ಜೂ. ೨೮ – ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂಬ ಕಾರಣಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಪ್ರತಿಭಟಿಸಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯು ನಗರದಲ್ಲಿಂದು ಪ್ರತಿಭಟನಾ ಪ್ರದರ್ಶನ ನಡೆಸಿತು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಬದಲು ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಪಡಿಸಿದರು.
ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವಷ್ಟು ಶಿಕ್ಷಕರ ನೇಮಕಾತಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಬೇಕು. ಶಿಕ್ಷಕರಿಗೆ ಅನಗತ್ಯ ಇತರೆ ಕೆಲಸಗಳ ಹೊರೆಯನ್ನು ಕಡಿಮೆ ಮಾಡಬೇಕು, ಮಾತೃಭಾಷಾ ಮಾಧ್ಯಮದಲ್ಲೇ ಒಂದು ಭಾಷೆಯಾಗಿ ಇಂಗ್ಲಿಷನ್ನು ಕಲಿಸಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವುದಾಗಿ ಸರ್ಕಾರ ಹಸಿ ಸುಳ್ಳು ಹೇಳುತ್ತಿದೆ. 4,200 ಶಾಲೆಗಳನ್ನು ಮುಚ್ಚುವುದಾಗಿ ಹೇಳಿಕೊಳ್ಳುವ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಬದ್ಧತೆ ಇಲ್ಲ ಎಂದು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ಮುಚ್ಚಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದಾಗ ಸುಮಾರು 700 ಶಾಲೆಗಳನ್ನು ಸ್ಥಳೀಯರು, ಪೋಷಕರು ಎನ್‌ಜಿಓ ಸಂಸ್ಥೆಗಳ ಸಹಾಯದಿಂದ ಪುನರಾರಂಭಿಸಲಾಗಿದೆ. ಇದೀಗ ಆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ದ್ವಿಗುಣಗೊಂಡಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಬರಹಗಾರರು, ಕನ್ನಡಪರ ಹೋರಾಟಗಾರರು ಹೇಳಿದರು.
ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಮೊದಲು ತರಗತಿಗೊಬ್ಬರು ವಿಷಯಾವಾರು ಶಿಕ್ಷಕರು ಆಂಗ್ಲ ಪರಿಣಿತ ಶಿಕ್ಷಣಕರೊಬ್ಬರನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಇಂದಿರಾ ಕೃಷ್ಣಪ್ಪ, ಡಾ. ವಸುಂದರಾ ಭೂಪತಿ, ಕರ್ನಾಟಕ ಜನಶಕ್ತಿಯ ಮಲ್ಲಿಗೆ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ರಾಜ್ಯ ಸಂಚಾಲಕ ಮುತ್ತುರಾಜ್, ಶ್ರೀಪಾದ್, ಕವಿತಾ, ಅಕಿಲಾ ಮತ್ತಿತರರು ಭಾಗವಹಿಸಿದ್ದರು.

Comments are closed.