ಕರ್ನಾಟಕ

ಮಲಪ್ರಭಾ ಕಾಮಗಾರಿ ಅಕ್ರಮ ಆರೋಪ ನಿರಾಧಾರ ಶೆಟ್ಟರ್‌ಗೆ ಸಚಿವ ಪಾಟೀಲ್ ತಿರುಗೇಟು

Pinterest LinkedIn Tumblr

jagadheesh-shettarಬೆಂಗಳೂರು, ಜೂ. ೨೫- ಮಲಪ್ರಭ ವಿತರಣಾ ನಾಲೆ ಹಾಗೂ ಉಪವಿತರಣಾ ನಾಲೆಯ ಕಾಮಗಾರಿಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ ಇದುವರೆವಿಗೂ ಯಾವುದೇ ಟೆಂಡರ್ ಕರೆದಿಲ್ಲ. ಟೆಂಡರ್ ಕರೆಯದೆ ರದ್ದು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಸಂಬಂಧ ವಿಧಾನಸಭೆಯ ವಿರೋಧ ಪಕ್ಷ ನಾಯಕ ಜಗದೀಶ್‌ಶೆಟ್ಟರ್ ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಳ್ಳು ಆರೋಪ ಮಾಡುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಇಂದಿಲ್ಲಿ ತಿರುಗೇಟು ನೀಡಿದರು.

ಕಾಲುವೆಗಳ ಆಧುನೀಕರಣ ಕಾಮಗಾರಿಗಳಿಗೆ ಸಂಬಂಧಪಟ್ಟ ಟೆಂಡರ್ ರದ್ದು ಮಾಡಲಾಗಿದೆ. ಈ ವಿಚಾರವನ್ನು ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಜಗದೀಶ್‌ಶೆಟ್ಟರ್ ಹೇಳಿರುವುದರ ಬಗ್ಗೆ ಪ್ರಸ್ತಾಪಿಸಿದ ಅವರು, ಶೆಟ್ಟರ್‌ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಬೇಕು. ಅದಕ್ಕೆ ತಕ್ಕ ಉತ್ತರ ನೀಡಲು ತಾವು ಸಿದ್ದ ಎಂದು ಸಚಿವ ಪಾಟೀಲ್ ಸವಾಲೆಸೆದರು.
ಶೆಟ್ಟರ್ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಕುರಿತು ಇದುವರೆಗಿನ ಎಲ್ಲಾ ಬೆಳವಣಿಗೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
* ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಮಲಪ್ರಭ ಯೋಜನೆಯ ವಿತರಣಾ ನಾಲೆ ಹಾಗೂ ಉಪವಿತರಣಾ ನಾಲೆಯ ಕಾಮಗಾರಿಗಳಿಗೆ ಯಾವುದೇ ರೀತಿಯ ಟೆಂಡರ್ ಕರೆದಿಲ್ಲ. ಈ ಸಂಬಂಧ ಶೆಟ್ಟರ್ ಆಪಾದನೆಯಲ್ಲಿ ಸತ್ಯಾಂಶ ಇಲ್ಲ.
* ಕಾಲುವೆಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಸಮೀಕ್ಷೆ ವಿಸ್ತೃತ ಯೋಜನಾ ವರದಿ ತಯಾರಿಕೆ ಕುರಿತ ಪ್ರಕ್ರಿಯೆಗಳು ಪ್ರಾಥಮಿಕ ಹಂತದಲ್ಲಿವೆ.
* ಟೆಂಡ‌ರ್ ಕರೆಯುವ ಪ್ರಕ್ರಿಯೆಯ ಹಂತ ತಲುಪಿಲ್ಲ.
* ಮಲಪ್ರಭ ಯೋಜನೆಯ ಎಡ ಮತ್ತು ಬಲದಂಡೆ ಕಾಲುವೆಗಳು ಅತ್ಯಂತ ದುಸ್ಥಿತಿಯಲ್ಲಿದ್ದು, ರೈತರ ಜಮೀನುಗಳಿಗೆ ನೀರಿಲ್ಲದೆ ತೊಂದರೆಯಲ್ಲಿದ್ದರೂ ಬಿಜೆಪಿ ಸರ್ಕಾರದಲ್ಲಿ ಯಾವುದೇ ಕಾಳಜಿ ವಹಿಸಿಲ್ಲ.
* ಈಗ ನಾವು ಆಧುನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದು, ಈ ಕಾಲುವೆಗಳ ವ್ಯಾಪ್ತಿಯಲ್ಲಿನ ಕೊನೆ ಹಂತದ ಜಮೀನುಗಳಿಗೂ ನೀರುಣಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಇದರಿಂದ ನಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕಾಗಿ ಜಗದೀಶ್‌ಶೆಟ್ಟರ್ ಆರೋಪ ಮಾಡಿದ್ದಾರೆ.
* ಮಹದಾಯಿ, ಕಳಸಾಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ಆ ಭಾಗದ ಜನರಿಗೆ ನ್ಯಾಯ ಒದಗಿಸಲು ಬಿಜೆಪಿ ನಾಯಕರಿಂದ ಆಗಿಲ್ಲ. ನಾವು ಈ ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ ಮುಂದಿನ ಚುನಾವಣೆಯಲ್ಲಿ ಅವರಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ.
* ಯೋಜನೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮುನ್ನ 8 ಹಂತಗಳ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು. ಮಾಜಿ ಮುಖ್ಯಮಂತ್ರಿಗಳು, ಮಾಜಿ ಗ್ರಾಮೀಣಾಭಿವೃದ್ಧಿ ಸಚಿವರು, ವೃತ್ತಿಯಲ್ಲಿ ವಕೀಲರೂ ಆದ ಶೆಟ್ಟರ್‌ರವರಿಗೆ ಟೆಂಡರ್ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬುದು ಗೊತ್ತಿಲ್ಲವೇ?.
* ಕೊಳಚೆ ಬಲದಂಡೆ ಕಾಲುವೆ ಕಾಮಗಾರಿಗಳಿಗೂ ಮಲಪ್ರಭ ಯೋಜನೆಯ ವಿತರಣಾ ಕಾಲುವೆಗಳಿಗೂ ಯಾವುದೇ ಸಂಬಂಧ ಇಲ್ಲ. ಎರಡೂ ಪ್ರತ್ಯೇಕ ಯೋಜನೆಗಳಾಗಿವೆ ಎಂದು ಸ್ಪಷ್ಟನೆ.
* ಈ ಎಲ್ಲಾ ವಿಚಾರಗಳ ಕುರಿತು ಜಗದೀಶ್‌ಶೆಟ್ಟರ್‌ರವರಿಗೆ ವಿವರವಾದ ದಾಖಲೆಗಳನ್ನು ಕಳುಹಿಸಿಕೊಡುತ್ತೇನೆ. ಅವರೇ ಪರಿಶೀಲಿಸಲಿ ಎಂದು ಸಚಿವರಿಂದ ಸವಾಲು.

Comments are closed.