ಬೆಂಗಳೂರು, ಜೂ. ೨೫- ಕೇಂದ್ರ ಸರ್ಕಾರ ಐಪಿಆರ್ (ಬೌದ್ಧಿಕ ಆಸ್ತಿ) ಕಾನೂನನ್ನು ಜಾರಿಗೆ ತಂದಿದ್ದು, ಅದರ ಪರಿಣಾಮಕಾರಿ ಅನುಷ್ಠಾನ ಅಗತ್ಯ ಎಂದು ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ಕುಮಾರ್ ಇಂದಿಲ್ಲಿ ಹೇಳಿದ್ದಾರೆ.
ಅಮೆರಿಕ ಸೇರಿದಂತೆ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಐಪಿಆರ್ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ಸಮಯ ಹಿಡಿಯುವುದಿಲ್ಲ. ಆದರೆ ಈ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ನಗರದಲ್ಲಿಂದು ಹಮ್ಮಿಕೊಂಡಿದ್ದ ಐಪಿಆರ್ ಮತ್ತು ವಾಣಿಜ್ಯ ಕಾನೂನುಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಐಪಿಆರ್ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದರಿಂದ ಸಮಸ್ಯೆಯನ್ನು ಬಗೆಹರಿಸಲು ಸಹಕಾರಿಯಾಗಲಿದೆ. ಸಿನಿಮಾ ಮತ್ತು ಹಾಡುಗಳಲ್ಲಿ ಈ ರೀತಿಯ ಕಾನೂನು ಹೆಚ್ಚು ಉಪಯೋಗವಾಗಲಿದೆ. ಈ ನಿಟ್ಟಿನಲ್ಲಿ ಅದರ ಮಹತ್ವ ಮತ್ತು ಉದ್ದೇಶದ ಬಗ್ಗೆ ಇನ್ನಷ್ಟು ಜಾಗೃತಿ ಮತ್ತು ಅರಿವು ಮೂಡಿಸುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಹೇಳಿದರು.
ಐಪಿಆರ್ ಕಾನೂನಿನ ಮಹತ್ವವನ್ನು ಅರಿಯುವ ಜತೆಗೆ ಅದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಆಗ ಮಾತ್ರ ಐಪಿಆರ್ ಕಾನೂನುಗಳನ್ನು ಉಲ್ಲಂಘಿಸುವುದು ಕಡಿಮೆಯಾಗಿದೆ ಎಂದ ಅವರು, ಎಲ್ಲರು ಕಾನೂನನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪೇಟೆಂಟ್ ಹಾಗೂ ಮತ್ತು ಬೌದ್ಧಿಕ ಆಸ್ತಿ ವಿಷಯಗಳಲ್ಲಿ ಐಪಿಆರ್ ಕಾನೂನು ಹೆಚ್ಚು ಉಪಯೋಗವಾಗಲಿದೆ. ಈಗಾಗಿ ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪಾಲಿಸುವ ಅಗತ್ಯವಿದೆ ಎಂದು ಹೇಳಿದರು.
ಫಾರ್ಮಸಿಟಿಕಲ್ ಕಂಪನಿಗಳು ಜನರಿಗೆ ಕೈಗೆಟಕುವ ದರದಲ್ಲಿ ಔಷಧಿಗಳನ್ನು ಕಂಡುಹಿಡಿಯುವ ಅಗತ್ಯವಿದೆ ಎಂದರು.
ಖಾಸಗೀಕರಣ, ಉದಾರೀಕರಣದ ನಂತರ ಭಾರತ ಮತ್ತಷ್ಟು ತೆರೆದುಕೊಂಡಿದ್ದು, ಹಲವು ಅವಕಾಶಗಳಿಗೆ ವೇದಿಕೆ ಕಲ್ಪಿಸಿದೆ ಎಂದು ಹೇಳಿದರು.
ಇದರಿಂದಾಗಿಯೇ ಭಾರತ ಇಂದು ವಿಶ್ವಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಐಪಿಆರ್ ಕಾನೂನು ಜಾರಿಗೆ ತಂದಿದ್ದು ಅದು ಸಮರ್ಪಕವಾಗಿ ಬಳಕೆಯಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಪಿಆರ್ ಕನ್ಸಲ್‌ಟೆನ್ಸ್ ಹರಿಕೃಷ್ಣ ಎಸ್. ಹೊಳ್ಳ, ಐಪಿಆರ್ ಅಧ್ಯಕ್ಷ ಡಾ. ಟಿ. ರಾಮಕೃಷ್ಣ, ವಿವಿಧ ತಜ್ಞರುಗಳಾದ ಡಾ.ಕೆ. ರಾಜೇಶ್ ನಾಯಕ್, ಎಸ್.ಎಸ್. ನಾಯಕ್ ಸೇರಿದಂತೆ ಮತ್ತಿತರರು ಇದ್ದರು.
Comments are closed.