ಹೈದರಾಬಾದ್: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಪ್ರಕರಣಗಳಿಂದ ನ್ಯಾಯಾಂಗಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರು ಸೋಮವಾರ ಹೇಳಿದ್ದಾರೆ.
ಈ ಎರಡು ಪ್ರಕರಣದ ನ್ಯಾಯಾಂಗ ನಿರ್ಧಾರಗಳು ಶ್ರೀಮಂತರು ಮತ್ತು ಪ್ರಭಾವಿಗಳು ಅತಿ ಬೇಗ ಜಾಮೀನು ಪಡೆದುಕೊಳ್ಳಬಹುದು ಎಂಬ ತಪ್ಪು ಸಂದೇಶ ರವಾನಿಸಿವೆ ಎಂದು ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. ಅಲ್ಲದೆ ಶ್ರೀಮಂತರು ಮತ್ತು ಪ್ರಭಾವಿಗಳು ಕಾನೂನು ಕಟ್ಟಳೆಗಳಿಂದ ತಪ್ಪಿಸಿಕೊಳ್ಳಬಹುದು ಎಂಬ ಸಾರ್ವಜನಿಕ ಅಭಿಪ್ರಾಯವನ್ನು ನಾನು ಸಂಪೂರ್ಣ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
‘ನಾನು ಎರಡು ಪ್ರಕರಣಗಳಿಂದ ನ್ಯಾಯಾಂಗಕ್ಕೆ ಕೆಟ್ಟ ಹೆಸರು ಬಂದಿದೆ ಅಂತ ಹೇಳಲು ಬಯಸುತ್ತೇನೆ. ಒಂದು 14 ವರ್ಷಗಳ ನಂತರ ವಿಶೇಷ ಕೋರ್ಟ್ ಜಯಲಲಿತಾ ಅವರು ತಪ್ಪಿತಸ್ಥೆ ಎಂದು ತೀರ್ಪು ನೀಡಿತ್ತು ಮತ್ತು ಮೇಲ್ಮನವಿ ಸ್ವೀಕರಿಸಿದ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಒಂದೇ ದಿನದಲ್ಲೇ ಅವರಿಗೆ ಜಾಮೀನು ನೀಡಿತ್ತು. ನಾನು ಅವರ ಜಾಮೀನಿಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಕೇವಲ 3 ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸುವಂತೆ ಸೂಚಿಸಲಾಗಿತ್ತು’ ಎಂದರು.
ಇನ್ನು ಸಲ್ಮಾನ್ ಕೇಸ್ ನಲ್ಲೂ ಇದೆ ಆಗಿದೆ. ಸುದೀರ್ಘ 14 ವರ್ಷಗಳ ವಿಚಾರಣೆ ಬಳಿಕ ಬಾಲಿವುಡ್ ನಟನಿಗೆ ಶಿಕ್ಷೆಯಾಗಿತ್ತು. ಆದರೆ ಹೈಕೋರ್ಟ್ ಆತನಿಗೆ ಒಂದು ಗಂಟೆಯಲ್ಲೇ ಜಾಮೀನು ನೀಡಿತು. ಈ ಎರಡು ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ನಿವೃತ್ತಿ ಅಂಚಿನಲ್ಲಿದ್ದರು ಎಂದರು.
ಜೈಲಿನಲ್ಲಿರುವ ನೂರಾರು ಜನ ಜಾಮೀನಿಗಾಗಿ 4ರಿಂದ 5 ವರ್ಷಗಳ ಕಾಲ ಕಾಯುತ್ತಿದ್ದಾರೆ ಎಂದು ಮಾಜಿ ಲೋಕಾಯುಕ್ತರು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.