ಕರ್ನಾಟಕ

ದಲಿತರಿಗೆ ಸೌಲಭ್ಯ-ಜಾಗೃತಿ ಸಮಿತಿ ರಚನೆ ಅಗತ್ಯ

Pinterest LinkedIn Tumblr

dಬೆಂಗಳೂರು, ಜೂ. ೪-ದಲಿತರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಕಾರ್ಯಕ್ರಮ ಹಾಗೂ ಕಾನೂನು ಸಮರ್ಪಕವಾಗಿ ಜಾರಿಗೊಳ್ಳುತ್ತಿವೆಯೊ ಎಂಬುದರ ಬಗ್ಗೆ ನಿಗಾ ವಹಿಸಲು ಕೇಂದ್ರ ಮತ್ತು ರಾಜ್ಯದಲ್ಲಿ ಜಾಗೃತಿ ಸಮಿತಿಯೊಂದನ್ನು ರಚಿಸಬೇಕು ಎಂದು ಸಂಸದ ಎಸ್.ಪಿ. ಮುದ್ದಹನಮೇಗೌಡ ಒತ್ತಾಯಿಸಿದ್ದಾರೆ.
ಶೂದ್ರಸೇನೆ ಹಾಗೂ ದಲಿತ ಸಂಘರ್ಷ ಸಮಿತಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿಂದು ‌ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಂ ಸ್ಮರಣಾರ್ಥ ಏರ್ಪಡಿಸಿದ್ದ ದಲಿತರಿಗೆ ಹೋರಾಟಗಾರರಿಗೆ ಅಭಿನಂದನೆ ಹಾಗೂ ದಲಿತ ವಾಯ್ಸ್ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಹಾಗೂ ಜಗಜೀವನ್ ರಾಂ ದಲಿತರ ಅಭಿವೃದ್ಧಿಗೆ ಸಾಕಷ್ಟು ಹೋರಾಟ ನಡೆಸಿದ್ದಾರೆ. ಅವರ ಹೋರಾಟವನ್ನು ಮುನ್ನಡೆಸಿಕೊಂಡು ಹೋಗಬೇಕಾದದ್ದು ನಮ್ಮ ಜವಾಬ್ದಾರಿ. ದಲಿತ ಹೋರಾಟಗಾರರು ಈ ನಿಟ್ಟಿನಲ್ಲಿ ಹೋರಾಟ ನ‌ಡೆಸುತ್ತಿದ್ದರೂ ನಮ್ಮ ಆಸೆ ಇನ್ನೂ ಈಡೇರಿಲ್ಲ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ ಅವುಗಳು ದಲಿತರಿಗೆ ಸರಿಯಾಗಿ ತಲುಪುತ್ತಿಲ್ಲ. ಈ ಬಗ್ಗೆ ನಿಗಾ ಇಡಲು ಮತ್ತು ಸಮರ್ಪಕವಾಗಿ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯದಲ್ಲಿ ಜಾಗೃತಿ ಸಮಿತಿಯಿರಬೇಕು. ಈ ಬಗ್ಗೆ ಎರಡು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಸಾಧ್ಯ. ಆದ್ದರಿಂದ ದಲಿತರು ಸೇರಿದಂತೆ ಎಲ್ಲ ವರ್ಗದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವ ಮೂಲಕ ಅವರನ್ನು ಸಬಲೀಕರಣಗೊಳಿಸಬೇಕು. ಅಂಬೇಡ್ಕರ್‌ರವರು ನಡೆಸಿದ ಹೋರಾಟವನ್ನು ಮುಂದುವರಿಸಿಕೊಂ‌ಡು ಹೋಗಬೇಕು ಎಂದು ಹೇಳಿದರು.
ನಿಗದಿಯಂತೆ ರಾಜ್ಯಸಭಾ ಚುನಾವಣೆ
ಈಗಾಗಲೇ ರಾಜ್ಯಸಭಾ ಚುನಾವಣೆ ದಿನಾಂಕ ಪ್ರಕಟಿಸಲಾಗಿದ್ದು, ಕಾನೂನಿನ ಪ್ರಕಾರ ಚುನಾವಣೆ ನಡೆಯಲಿದೆ ಎಂದು ರಾಜ್ಯಸಭೆಗೆ ಸ್ಪರ್ಧಿಸಿರುವ ಆಸ್ಕರ್ ಫರ್ನಾಂಡಿಸ್ ತಿಳಿಸಿದ್ದಾರೆ.
ಕಾನೂನಿನ ಪ್ರಕಾರ ಅಭ್ಯರ್ಥಿ ನಿಧನ ಹೊಂದಿದರೆ ಮಾತ್ರ ಚುನಾವಣೆಯನ್ನು ಮುಂದೂಡಬಹುದು. ಇಲ್ಲದಿದ್ದರೆ ಚುನಾವಣೆ ನಿಗದಿಯಂತೆ ನ‌ಡೆಯುತ್ತದೆ. ಆದ್ದರಿಂದ ಈ ಬಾರಿಯ ಚುನಾವಣೆಯು ನಿಗದಿಯಂತೆ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಚುನಾವಣೆಯಲ್ಲಿ ಹಣದ ಅಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಮೂರನೇ ಅಭ್ಯರ್ಥಿ ಬಗ್ಗೆ ಕೇಳಿದಾಗ ಇದು ಪಕ್ಷದ ತೀರ್ಮಾನ. ಪಕ್ಷ ತೀರ್ಮಾನಕ್ಕೆ ನಾವೆಲ್ಲ ಬದ್ಧವಾಗಿರುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಸಿದ್ದರಾಜು, ಅಣ್ಣಯ್ಯ, ಎನ್.ಮೂರ್ತಿ, ಪಾವಗಡ ಶ್ರೀರಾಮ್, ಮಾವಳ್ಳಿ ಶಂಕರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಸದ ಶಾಂತರಾಮ್ ನಾಯಕ್, ಮಾದರ ಚನ್ನಯ್ಯ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಶೂದ್ರ ಸೇನೆಯ ಮುರಳೀಧರ ಹಾಲಪ್ಪ, ಜಗದೀಶ್ ಮತ್ತಿತರರು ಭಾಗವಹಿಸಿದ್ದರು.

Comments are closed.