ಕರ್ನಾಟಕ

ವಿಧಾನಪರಿಷತ್ – ರಾಜ್ಯಸಭೆಗೆ ಚುನಾವಣೆ; ಜೆಡಿಎಸ್‍ಜೊತೆಗಿನ ಮೈತ್ರಿಗೆ ಬಿಜೆಪಿಯೊಳಗೆ ಆರಂಭವಾಗಿದೆ ಶೀತಲ ಸಮರ

Pinterest LinkedIn Tumblr

bjpjds

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ ಹಾಗೂ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‍ಗೆ ಬೆಂಬಲ ನೀಡುವ ಕುರಿತು ಬಿಜೆಪಿಯಲ್ಲಿ ಶೀತಲ ಸಮರ ಉಂಟಾಗಿದೆ. ಭವಿಷ್ಯದ ಹಿತದೃಷ್ಟಿಯಿಂದ ಜೆಡಿಎಸ್ ಜೊತೆ ಮೈತ್ರಿಗೆ ಕೆಲ ನಾಯಕರು ಮುಕ್ತ ಮನಸ್ಸು ಹೊಂದಿದ್ದಾರೆ. ಆದರೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸುತರಾಮ್ ತೆನೆ ಹೊತ್ತ ಮಹಿಳೆಯ ಸಹವಾಸವೇ ಬೇಡ ಎಂಬ ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಇನ್ನು ಇದು ಇನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಮಂಗಳವಾರ ತಡರಾತ್ರಿ ಬಿಜೆಪಿ ಮುಖಂಡ ಆರ್.ಅಶೋಕ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜೊತೆ ರಹಸ್ಯ ಮಾತುಕತೆ ನಡೆಸಿದ್ದರು.

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‍ನ 2ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಸ್.ಎಂ.ವೆಂಕಟಮೂರ್ತಿಗೆ ಹೆಚ್ಚವರಿ ಮತಗಳನ್ನು ನೀಡುವ ಸಂಬಂಧ ಮಾತುಕತೆ ನಡೆದಿತ್ತು. ಕೊರತೆ ಎದಿರಿಸುತ್ತಿರುವ ರಾಜ್ಯಸಭೆ ಹಾಗೂ ಪರಿಷತ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳಿಗೆ ಹೆಚ್ಚುವರಿ ಮತಗಳನ್ನು ನೀಡಿದರೆ ಭವಿಷ್ಯದಲ್ಲಿ ಎಲ್ಲಾ ರೀತಿಯ ಮೈತ್ರಿಗೆ ಪಕ್ಷ ಸಿದ್ಧವಿದೆ ಎಂಬ ಸಂದೇಶವನ್ನು ಕುಮಾರಸ್ವಾಮಿ ರವಾನಿಸಿದ್ದರು.
ಪಕ್ಷದ ವರಿಷ್ಠ ದೇವೇಗೌಡರು ವಿರೋಧ ವ್ಯಕ್ತಪಡಿಸಿದರೂ ಚಿಂತೆ ಇಲ್ಲ. ಈ ಚುನಾವಣೆಯಲ್ಲಿ ಬೆಂಬಲ ನೀಡಿದರೆ ಬಿಬಿಎಂಪಿ ಸೇರಿದಂತೆ ಎಲ್ಲಾ ಹಂತದ ಚುನಾವಣೆಯಲ್ಲಿ ದೋಸ್ತಿ ಮಾಡಿಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ತಲೆ ಎತ್ತದಂತೆ ನೋಡಿಕೊಳ್ಳಣ ಎಂಬ ವಾಗ್ದಾನ ಕುಮಾರಸ್ವಾಮಿಯವರಿಂದ ಬಂದಿತ್ತು. ಇದಕ್ಕೆ ಅಶೋಕ್ ಸಹಮತ ವ್ಯಕ್ತಪಡಿಸಿದ್ದರು.

ಬಿಎಸ್‍ವೈ ಕೆಂಡಾಮಂಡಲ:

ಆದರೆ ತಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅಧಿಕಾರ ಕಳೆದುಕೊಳ್ಳಲು ಹಾಗೂ ತನಗೆ ಇನ್ನಿಲ್ಲದಂತೆ ಕಾಡಿದ್ದ ಜೆಡಿಎಸ್ ಜೊತೆ ದೋಸ್ತಿಗೆ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲು ನಮಗೆ ಯಾವುದೇ ಸಮಸ್ಯೆ ಇಲ್ಲ. 44 ಶಾಸಕರ ಜೊತೆ ಪಕ್ಷೇತರರಾದ ಕುಂದಾಪುರದ ಹಾಲಾಡಿ ಶ್ರೀನಿವಾಸ್ ಶೆಟ್ಟಿ , ಚಳ್ಳಕೆರೆಯ ಎಸ್.ತಿಪ್ಪೇಸ್ವಾಮಿ, ಕೂಡ್ಲಗಿಯ ಬಿ.ನಾಗೇಂದ್ರ ಅವರುಗಳು ಮತ ಹಾಕುವುದಾಗಿ ಹೇಳಿದ್ದಾರೆ. ಇನ್ನು ಪರಿಷತ್ ಚುನಾವಣೆಯಲ್ಲಿ 12 ಮತಗಳು ಕೊರತೆ ಎದುರಾದರೂ ಪಕ್ಷೇತರ ಶಾಸಕರು ಹಾಗೂ ಕಾಂಗ್ರೆಸ್‍ನ ಹೆಚ್ಚುವರಿ ಮತಗಳನ್ನು ಹೊಂದಿಸುವ ಜವಾಬ್ದಾರಿ ನನಗಿರಲಿ. ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂದು ಕಡ್ಡಿ ಮುರಿದಂತೆ ಪಕ್ಷದ ಮುಖಂಡರಿಗೆ ಬಿಎಸ್‍ವೈ ಹೇಳಿರುವುದಾಗಿ ವರದಿಯಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಮೈಸೂರಿನಲ್ಲಿ ಮಾತನಾಡಿರುವ ಬಿಎಸ್‍ವೈ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಅಶೋಕ್ ಯಾರೊಬ್ಬರ ಜತೆ ಮಾತುಕತೆ ನಡೆಸಿಲ್ಲ ಎನ್ನುವ ಮೂಲಕ ಮೈತ್ರಿಗೆ ತಮ್ಮ ವಿರೋಧವಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಬುಧವಾರ ನಡೆದ ವಿದ್ಯಾಮಾನಗಳ ಪ್ರಕಾರ ಉಭಯ ಪಕ್ಷಗಳ ನಾಯಕರು ತೆರೆಮರೆಯಲ್ಲಿ ದೋಸ್ತಿ ಕುದುರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಒಲವು ಹೊಂದಿದ್ದರೂ ಉಗ್ರ ಪ್ರತಾಪಿ ಯಡಿಯೂರಪ್ಪ ಮಾತ್ರ ಒಪ್ಪುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ನಾಮಪತ್ರ ಹಿಂಪಡೆಯಲು ಶುಕ್ರವಾರ ಕಡೆಯ ದಿನವಾಗಿರುವುದರಿಂದ ಇನ್ನು ಕಾಲ ಮಿಂಚಿಲ್ಲ ಎಂಬುದು ಎರಡೂ ಪಕ್ಷಗಳ ನಾಯಕರ ಆಶಾವಾದ.

Comments are closed.