ಕರ್ನಾಟಕ

ಬಿಬಿಎಂಪಿ ಶಾಲೆಗಳಲ್ಲಿ ಜೂನ್‌ನಲ್ಲಿ ಪಠ್ಯಪುಸ್ತಕ ವಿತರಣೆ

Pinterest LinkedIn Tumblr

bbmp_logoಬೆಂಗಳೂರು, ಮೇ ೨೮- ಯಾವುದೇ ವಿವಾದ ಮತ್ತು ಗೊಂದಲಕ್ಕೆ ಒಳಗಾಗದಂತೆ ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳಿಗೆ ಜೂನ್ ಮೊದಲ ವಾರದಲ್ಲಿ ಪಠ್ಯಪುಸ್ತಕಗಳನ್ನು ವಿತರಿಸಲಾಗುವುದೆಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ನಾಗಭೂಷಣ ಅವರು ಇಂದು ಇಲ್ಲಿ ತಿಳಿಸಿದರು.

ಶಿಕ್ಷಣ ಸ್ಥಾಯಿ ಸಮಿತಿ ವತಿಯಿಂದ ಪಾಲಿಕೆ ನೌಕರರ ಸಭಾಂಗಣದಲ್ಲಿ 2015-16ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 90 ಕ್ಕಿಂತ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಒಂದು ತಿಂಗಳೊಳಗೆ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಶಾಲಾ ಮಕ್ಕಳಿಗೆ ಶೂ ಗಳನ್ನು ಖರೀದಿ ಮಾಡುವ ಸಂಬಂಧ ನೇರವಾಗಿ ಮಕ್ಕಳಿಗೆ ಆರ್.ಟಿ.ಜಿ.ಎಸ್. ಮೂಲಕ ಹಣ ನೀಡುವ ಬದಲಾಗಿ ಪಾಲಿಕೆಯೇ ನೇರವಾಗಿ ಶೂ ಖರೀದಿಸಿ ನೀಡುವ ಬಗ್ಗೆ ಮೇಯರ್ ಮತ್ತು ಆಯುಕ್ತರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಆರ್.ಟಿ.ಜಿ.ಎಸ್ ಮೂಲಕ ಹಣ ನೀಡಿದಲ್ಲಿ ಮಕ್ಕಳು ಶೂ ಕೊಳ್ಳುತ್ತಾರೆ ಎಂಬ ಬಗ್ಗೆ ಗ್ಯಾರಂಟಿ ಇಲ್ಲ. ಹಾಗಾಗಿ ನೇರವಾಗಿ ಬಿಬಿಎಂಪಿಯಿಂದಲೇ ಖರೀದಿಸಿ ನೀಡಲಾಗುವುದು ಎಂದರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವೇಳೆ ಅತಿ ಹೆಚ್ಚು ಅಂಕ ಗಳಿಸಿದ ಪಿಯುಸಿ ವಿದ್ಯಾರ್ಥಿಗಳಿಗೆ 35 ಸಾವಿರ ರೂ. ಎಸ್.ಎಸ್.ಎಲ್.ಸಿ. ನವಿದ್ಯಾರ್ಥಿಗಳಿಗೆ 10 ಸಾವಿರ ರೂ. ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದರು.

ಕಳೆದ ಬಾರಿಗೆ ಹೋಲಿಸಿದರೆ, ಪಾಲಿಕೆ ಕಾಲೇಜುಗಳಲ್ಲಿ ಈ ಬಾರಿ ಫಲಿತಾಂಶದ ಪ್ರಮಾಣ ಕುಸಿದಿದೆ. ಕಳೆದ ವರ್ಷ ಶೇ. 60 ರಷ್ಟು ಫಲಿತಾಂಶ ಬಂದಿದ್ದರೆ, ಈ ಬಾರಿ 56.17 ರಷ್ಟು ಫಲಿತಾಂಶ ಬಂದಿದೆ.

ಫಲಿತಾಂಶ ಕುಸಿಯಲು ಕಾರಣವೇನು ಎಂಬ ಬಗ್ಗೆ ಮುಂದಿನ ವಾರದೊಳಗೆ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರನ್ನು ಕರೆದು ಚರ್ಚೆ ನಡೆಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 101 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸ್ಥಾಯಿ ಸಮಿತಿ ಸದಸ್ಯರಾದ ಲತಾ ಲೀಲಾ ಶಿವಕುಮಾರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.