ಕರ್ನಾಟಕ

ಮದುವೆಗೆ ಹೊರಟಿದ್ದ ಬಸ್ ಉರುಳಿ ಮೂವರು ದುರ್ಮರಣ; 20ಕ್ಕೂ ಹೆಚ್ಚು ಮಂದಿ ಗಾಯ

Pinterest LinkedIn Tumblr

accident

ರಾಮನಗರ: ಮದುವೆಗೆ ಜನರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕನಕಪುರ ತಾಲೂಕಿನ ಸಂಗಮದಲ್ಲಿ ನಡೆದಿದೆ.

ಮೃತರನ್ನು ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕೆಸ್ತೂರು ಗ್ರಾಮದ ಕರೀಗೌಡ, ದೇವರಾಜು (30) ಮತ್ತು ಮಳ್ಳಿಪುರದ ಬಸವೇಗೌಡ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 20ಕ್ಕೂ ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 10 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಲೂಕಿನ ತಮಿಳುನಾಡು ಗಡಿಭಾಗವಾದ ಮಂಚ್ಗೊಂಡನಹಳ್ಳಿಯ ವರ ಮತ್ತು ಸಂಗಮದ ಬೊಮ್ಮಸಂದ್ರದ ವಧುವಿಗೆ ಮದುವೆ ನಿಶ್ಚಯವಾಗಿ ಮಡಿವಾಳದ ಶಿವನಾಂಕಾರೇಶ್ವರ ದೇವಾಲಯದಲ್ಲಿ ವಿವಾಹ ನಡೆಯುತ್ತಿತ್ತು. ಆ ಮದುವೆಗೆ ವರನ ಕಡೆಯವರು ಸುಮಾರು 80 ಕ್ಕೂ ಹೆಚ್ಚು ಮಂದಿ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದರು. ಮದುವೆಗೆ ಹೋಗಲು ತಡವಾಗುತ್ತಿದೆ ಎಂದು ಚಾಲಕ ಅತಿ ವೇಗವಾಗಿ ಬಸ್ಸನ್ನು ಚಲಾಯಿಸುತ್ತಿದ್ದ. ಸಂಗಮದ ಕಡಿದಾದ ತಿರುವಿನಲ್ಲೂ ಬಸ್ಸನ್ನು ವೇಗವಾಗಿ ಚಲಿಸಲು ಹೋಗಿ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಚಾಲಕ ಪರಾರಿ: ಬಸ್ಸು ಪಲ್ಟಿ ಹೊಡೆಯುತ್ತಿದ್ದಂತೆ ಬಸ್ಸಿನಿಂದ ಜಿಗಿದು ಚಾಲಕ ಪರಾರಿಯಾಗಿದ್ದಾನೆ. ಅಪಘಾತವಾಗುತ್ತಿದ್ದಂತೆ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದ, ಓರ್ವ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮತ್ತೋರ್ವ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಅಸುನೀಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸಾತನೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.