ಕರ್ನಾಟಕ

ವಿಷ ಕುಡಿಯಲು ಮುಂದಾದ ಅಂಗವಿಕಲ ಕ್ರೀಡಾಪಟುಗಳು

Pinterest LinkedIn Tumblr

Mys10-SPORT-11ಮೈಸೂರು: ಕ್ರೀಡಾ ಇಲಾಖೆಯು ತಮಗೆ ಪ್ರೋತ್ಸಾಹ ಧನ ಪ್ರಕಟಿಸಿಲ್ಲ ಎಂಬ ಕಾರಣಕ್ಕೆ ಅಂಗವಿಕಲ ಕ್ರೀಡಾಪಟುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಷ ಕುಡಿಯಲು ಮುಂದಾದ ಘಟನೆ ನಡೆಯಿತು.
ಮಾನಸಗಂಗೋತ್ರಿಯಲ್ಲಿರುವ ಸೆನೆಟ್‌ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಒಲಿಂಪಿಕ್ಸ್‌ ಸೇರಿದಂತೆ ಮೊದಲಾದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿರುವ 41 ಕ್ರೀಡಾಪಟುಗಳಿಗೆ ₹ 1.48 ಕೋಟಿ ನಗದು ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಭಾಂಗಣಕ್ಕೆ ಬಂದ ಸುಮಾರು 15 ಅಂಗವಿಕಲ ಕ್ರೀಡಾಪಟುಗಳು ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿರುವ ತಮ್ಮನ್ನು ನಗದು ಬಹುಮಾನಕ್ಕೆ ಪರಿಗಣಿಸಿಲ್ಲ ಎಂದು ಧರಣಿ ಕುಳಿತರು. ಮುಖ್ಯಮಂತ್ರಿಗಳು ಕಾರ್ಯಕ್ರಮದಿಂದ ನಿರ್ಗಮಿಸುವ ವೇಳೆ ಮನವಿ ಸಲ್ಲಿಸಲು ಮುಂದಾದರು. ಮನವಿ ಪತ್ರ ಸ್ವೀಕರಿಸಿದ ಸಿದ್ದರಾಮಯ್ಯ, ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ಇದರಿಂದ ಕುಪಿತಗೊಂಡ ಅಂಗವಿಕಲ ಅಥ್ಲೀಟ್‌ಗಳು, ‘ಪ್ರತಿ ಬಾರಿಯೂ ಇದೇ ರೀತಿ ಭರವಸೆ ನೀಡುತ್ತಾರೆ. 2010ರಿಂದ ಮನವಿ ಮಾಡುತ್ತಲೇ ಇದ್ದೇವೆ. ನಮ್ಮ ಸಾಧನೆಗೆ ಬೆಲೆಯೇ ಇಲ್ಲವೇ’ ಎಂದು ವಿಷ ಕುಡಿಯಲು ಮುಂದಾದರು. ಆಗ ಪೊಲೀಸರು ವಿಷದ ಬಾಟಲಿಯನ್ನು ಕಿತ್ತುಕೊಂಡರು.
‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಾವು ಕೂಡ ಪದಕ ಗೆದ್ದಿದ್ದೇವೆ. ಆದರೆ, ಸಾಮಾನ್ಯ ಸ್ಪರ್ಧಿಗಳಿಗೆ ನಗದು ಬಹುಮಾನ ನೀಡಿ ನಮಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಅಂಗವಿಕಲ ಕ್ರೀಡಾಪಟು ತುಳಸೀಧರ್‌ ದೂರಿದರು.
ರಾಷ್ಟ್ರೀಯ ಪ್ಯಾರಾಲಿಂಪಿಕ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌, ಅಂಗವಿಕಲರ ರಾಷ್ಟ್ರೀಯ ಕ್ರೀಡಾಕೂಟ, ರಾಷ್ಟ್ರೀಯ ವ್ಹೀಲ್‌ಚೇರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌, ರಾಷ್ಟ್ರೀಯ ಪ್ಯಾರಾ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌, ದುಬೈ ಅಂಗವಿಕಲರ ಕ್ಲಬ್ ಹಾಗೂ ವಿವಿಧ ದೇಶಗಳಲ್ಲಿ ನಡೆದ ಮುಕ್ತ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗಳಲ್ಲಿ ಗೆದ್ದ ಪದಕ ಹಾಗೂ ಪ್ರಮಾಣಪತ್ರ ತೋರಿಸಿದರು.
ಕೆಲ ಪ್ರಮಾಣಪತ್ರಗಳಲ್ಲಿ ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯ ಪ್ರಭಾರ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಭಾರತೀಯ ಅಂಗವಿಕಲರ ಬ್ಯಾಡ್ಮಿಂಟನ್‌ ಕ್ರೀಡಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ರಮೇಶ್‌ ಟಿಕರಾಮ್‌ ಅವರ ಸಹಿ ಇದೆ. ವಿವಿಧ ದೇಶಗಳಲ್ಲಿ ನಡೆದ ಮುಕ್ತ ಕ್ರೀಡಾಕೂಟಗಳಿಗೆ ಆಯಾ ದೇಶಗಳ ಕ್ಲಬ್‌ಗಳ ಅಧ್ಯಕ್ಷರ ಸಹಿ ಇದೆ.

Write A Comment