ಕರ್ನಾಟಕ

ತಕ್ಷಣದಿಂದಲೇ ರಾಜ್ಯದ 120 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಮುಂದಾಗುವೆ : ಎಚ್‌ಡಿಕೆ

Pinterest LinkedIn Tumblr

hdkಮೈಸೂರು,ಏ.17-ಪಕ್ಷದ ಬಲವರ್ಧನೆಗಾಗಿ ಮೊದಲ ಕಾರ್ಯಕ್ರಮವಾಗಿ ರಾಜ್ಯದ 120 ಕ್ಷೇತ್ರಗಳಲ್ಲಿ ತಕ್ಷಣದಿಂದಲೇ ಪಕ್ಷ ಸಂಘಟನೆಗೆ ಮುಂದಾಗುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ 2018ರ ಚುನಾವಣೆಯಲ್ಲಿ 110 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದರು.

ನಮ್ಮ ಪಕ್ಷಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರಮುಖ ಮುಖಂಡರು ಇಲ್ಲದಿದ್ದರೂ 40 ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರೇ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಹಾಗಾಗಿ ಈ ಬಾರಿ ಸಂಘಟನಾ ಕಾರ್ಯವನ್ನು ಈಗಿನಿಂದಲೇ ಕೈಗೊಂಡು ಎಲ್ಲ ಜಿಲ್ಲೆಗಳಲ್ಲೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಆ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಮುಂಬರುವ ಚುನಾವಣೆಗೆ ವೇದಿಕೆ ಸಿದ್ದಪಡಿಸಲಾಗುವುದು ಎಂದು ತಿಳಿಸಿದರು. ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿಯಷ್ಟು ನಾವು ಆರ್ಥಿಕವಾಗಿ ಸಬಲರಲ್ಲ. ಆದರೂ ಮುಂದಿನ ಚುನಾವಣೆಯಲ್ಲಿ ಇವೆರಡು ರಾಷ್ಟ್ರೀಯ ಪಕ್ಷಗಳನ್ನು ಮೆಟ್ಟಿ ನಿಲ್ಲುವಷ್ಟು ಚೈತನ್ಯವನ್ನು ನಮ್ಮ ಕಾರ್ಯಕರ್ತರಲ್ಲಿ ತುಂಬುತ್ತೇವೆ ಎಂದು ಹೇಳಿದರು.

ಜನಾರ್ಧನರೆಡ್ಡಿಯಂತಹ ನೂರಾರು ಮಂದಿಯನ್ನು ಬಿಜೆಪಿ ಹುಟ್ಟು ಹಾಕುತ್ತಿದೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಇನ್ನಷ್ಟು ಜನಾರ್ಧನರೆಡ್ಡಿಯಂತವರು ಹುಟ್ಟಿಕೊಳ್ಳುತ್ತಾರೆ. ನಾವು ಇದನ್ನೆಲ್ಲ ಎದುರಿಸಿ ಚುನಾವಣೆಯಲ್ಲಿ 110 ಸ್ಥಾನ ಗೆಲ್ಲುತ್ತೇವೆ ಎಂದರು. ಈಗಿನ ಸರ್ಕಾರಕ್ಕೆ ಒಳ್ಳೆಯ ಬುದ್ದಿ ಕೊಟ್ಟು ಉತ್ತಮ ಆಡಳಿತ ನೀಡಲಿ ರಾಜ್ಯದ ಬರ ಪರಿಹಾರವಾಗಲಿ, ಮಳೆ-ಬೆಳೆ ಚೆನ್ನಾಗಿ ಆಗಲಿ ಎಂದು ದೇವಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಎಚ್‌ಡಿಕೆ ತಿಳಿಸಿದರು.

ಮೈಸೂರಿನಲ್ಲಿ ನನಗೆ ರಾಜಕೀಯ ಜೀವನದಲ್ಲಿ ಬೃಹತ್ ತಿರುವುದು ಸಿಕ್ಕಿದೆ. ಹಾಗಾಗಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಇಂದಿನಿಂದಲೇ ಪಕ್ಷ ಸಂಘಟನಾ ಕಾರ್ಯವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಮತ್ತಿತರರು ಹಾಜರಿದ್ದರು.

Write A Comment