ಕರ್ನಾಟಕ

ಕೋಟಿ ಬೆಲೆ ಬಾಳುವ ಲ್ಯಾಂಡ್ ಕ್ರೂಸರ್ ಫ್ರಾಡೋ ಕಾರನ್ನು ನಿರಾಣಿಗೆ ಹಿಂದಿರುಗಿಸಿದ ಬಿಎಸ್‌ವೈ

Pinterest LinkedIn Tumblr

carಬೆಂಗಳೂರು,ಏ.17-ತೀವ್ರ ವಿವಾದ ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಮುರುಗೇಶ್ ನಿರಾಣಿ ಉಡುಗೊರೆಯಾಗಿ ನೀಡಿದ್ದ ಕಾರನ್ನು ಹಿಂದಿರುಗಿಸಿದ್ದಾರೆ. ಕೆಲ ದಿನಗಳ ಹಿಂದೆ ಯಡಿಯೂರಪ್ಪನವರಿಗೆ ನಿರಾಣಿ ಒಂದು ಕೋಟಿಗೂ ಅಧಿಕ ಬೆಲೆ ಬಾಳುವ ಲ್ಯಾಂಡ್ ಕ್ರೂಸರ್ ಫ್ರಾಡೋ ಕಾರನ್ನು ಉಚಿತವಾಗಿ ನೀಡಿದ್ದರು. ಯಡಿಯೂರಪ್ಪ ಈ ಕಾರನ್ನು ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲು ಬಳಕೆ ಮಾಡಿಕೊಳ್ಳುವ ಇಂಗಿತ ಹೊಂದಿದ್ದರು. ಆದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಪರ ವಿರೋಧ ವ್ಯಕ್ತವಾಗಿತ್ತು.

ರಾಜ್ಯದಲ್ಲಿ ಬರಗಾಲ ಆವರಿಸಿರುವ ಕಾರಣ ಯಡಿಯೂರಪ್ಪ ಇಷ್ಟು ದುಬಾರಿ ಬೆಲೆಯ ಕಾರಿನಲ್ಲಿ ಪ್ರವಾಸ ಕೈಗೊಳ್ಳುವ ಅಗತ್ಯವಾದರೂ ಏನಿತ್ತು ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಅಲ್ಲದೆ ಪ್ರತಿಪಕ್ಷಗಳು ಸಹ ಯಡಿಯೂರಪ್ಪ ಬರಗಾಲದ ವೇಳೆ ಒಂದು ಕೋಟಿ ಬೆಲೆ ಬಾಳುವ ಹವಾನಿಯಂತ್ರಿತ ಕಾರಿನಲ್ಲಿ ಪ್ರವಾಸ ಕೈಗೊಳ್ಳುತ್ತಿರುವುದು ಮೋಜಿಗೆ ಹೊರಟಂತಿದೆ ಎಂದು ಟೀಕಿಸಿದ್ದರು. ಇದರಿಂದ ಎಚ್ಚೆತ್ತುಕೊಂಡು ಬಿಎಸ್‌ವೈ ಅಗತ್ಯವಿರವ ಕಡೆ ಮಾತ್ರ ಲ್ಯಾಂಡ್ ಕ್ರೂಸರ್ ಫ್ರಾಡೋ ಕಾರು ಬಳಸುತ್ತೇನೆ, ಉಳಿದ ಕಡೆ ರೈಲಲ್ಲೇ ಪ್ರಯಾಣಿಸಿ ಜಿಲ್ಲಾ ಮುಖಂಡರು ನೀಡುವ ಕಾರಿನಲ್ಲೇ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದರು.

ಆದರೆ ಇದೀಗ ಎಲ್ಲ ವಿವಾದಕ್ಕೆ ಅಂತ್ಯ ಹಾಡಿರುವ ಬಿಎಸ್‌ವೈ ನಿರಾಣಿ ನೀಡಿದ್ದ ಕಾರನ್ನು ಅವರಿಗೇ ಹಿಂದಿರುಗಿಸಿದ್ದಾರೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಬಸ್ಸು , ರೈಲು ಇತರ ವಾಹನಗಳಲ್ಲೇ ಪಕ್ಷ ಸಂಘಟಿಸಿದ್ದೇನೆ. ನನಗೆ ಇಂಥದ್ದೇ ಕಾರು ಬೇಕು ಎಂದು ಕೇಳಿದವನಲ್ಲ. ಈಗ ನಾನು ಬಳಸುತ್ತಿರುವ ಕಾರಿನ ಬಗ್ಗೆ ವಿಶೇಷ ಅರ್ಥ ಬರುತ್ತಿರುವುದರಿಂದ ಕಾರನ್ನು ಅವರಿಗೆ ಹಿಂದಿರುಗಿಸುತ್ತಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment