ಕರ್ನಾಟಕ

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೂ ಕುತ್ತು

Pinterest LinkedIn Tumblr

Resultಬೆಂಗಳೂರು, ಎ.೧೭: ನಾಳೆಯಿಂದ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಆರಂಭಗೊಳ್ಳಬೇಕಿದ್ದು ಪ್ರೌಢಶಾಲಾ ಶಿಕ್ಷಕರ ಸಂಘದಲ್ಲಿ ಮೌಲ್ಯಮಾಪನ ವಿಷಯದಲ್ಲಿ ಬಿರುಕು ಉಂಟಾಗಿದ್ದು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಅವರು ಮೌಲ್ಯಮಾಪನ ನಡೆಸುವುದಾಗಿ ಹೇಳಿದರೆ, ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಿ.ಸಿ.ಗೋಪಿನಾಥ್, ಯಾವುದೇ ಕಾರಣಕ್ಕೂ ಮೌಲ್ಯಮಾಪನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಮಂಜುನಾಥ್, ಸರ್ಕಾರ ನಮ್ಮ ಪ್ರಮುಖ ಬೇಡಿಕೆ ಈಡೇಸಿದೆ. ಇನ್ನೂ ಒಂದೆರಡು ಬೇಡಿಕೆಗಳಿವೆ, ಅವುಗಳನ್ನು ಸರ್ಕಾರ ಈಡೇರಿಸುವ ಭರವಸೆ ನೀಡಿದೆ. ಹಾಗಾಗಿ ಇಂದಿನಿಂದಲೇ ಕೋಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ೬೨ ಸಾವಿರ ಶಿಕ್ಷಕರು ನಮ್ಮ ಸಂಘದಡಿ ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ ೩೫ ಸಾವಿರ ಶಿಕ್ಷಕರು ಮೌಲ್ಯಮಾಪನದಲ್ಲಿ ಭಾಗವಹಿಸುತ್ತಾರೆ. ೨೮೦ ಕೇಂದ್ರಗಳಲ್ಲೂ ನಮ್ಮ ಸದಸ್ಯರು ಹಾಜರಾಗುತ್ತಾರೆ ಎಂದು ತಿಳಿಸಿದರು.
ಆದರೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಗೋಪಿನಾಥ್, ಇಂದು ನಡೆಯಬೇಕಿದ್ದ ಕೋಡಿಂಗ್ ಪ್ರಕ್ರಿಯೆಯನ್ನು ಶಿಕ್ಷಕರು ಬಹಿಷ್ಕರಿಸಿದ್ದಾರೆ. ಕುಮಾರ್ ನಾಯಕ್ ವರದಿ ಜಾರಿಯಾಗಬೇಕು ಎಂಬುದು ನಮ್ಮ ಬೇಡಿಕೆಯೂ ಆಗಿದೆ. ಹಾಗಾಗಿ ನಾಳೆಯ ಮೌಲ್ಯಮಾಪನದಲ್ಲಿ ಯಾರೂ ಭಾಗವಹಿಸುವುದಿಲ್ಲ. ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ, ಹೈ-ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಕೋಡಿಂಗ್ ಪ್ರಕ್ರಿಯೆ ನಡೆದಿಲ್ಲ ಎಂದು ತಿಳಿಸಿದರು.
ಇದು ಶಿಕ್ಷಕರ ಸ್ವಾಭಿಮಾನದ ಪ್ರಶ್ನೆ. ಶಿಕ್ಷಕರನ್ನು ಬೀದಿಯಲ್ಲಿ ನಿಲ್ಲಿಸಿ, ಅವರ ಬೇಡಿಕೆ ಈಡೇರಿಸದೆ ಅಗೌರವ ತೋರಲಾಗಿದೆ. ವಿದ್ಯಾರ್ಥಿಗಳು ಕೂಡ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ್ದು, ಇಂತಹ ಸಂದರ್ಭದಲ್ಲಿ ಮೌಲ್ಯಮಾಪನ ಮಾಡುವುದು ಸರಿಯಲ್ಲ. ಮಂಜುನಾಥ್ ಹೇಳಿಕೆ ಖಂಡನೀಯ ಎಂದು ಹೇಳಿದರು.
ನಾಳೆ ಮೌಲ್ಯಮಾಪನ ನಡೆಯುತ್ತದೆಯೋ ಇಲ್ಲವೋ ಎಂಬುದು ಗೊತ್ತಾಗಲಿದೆ.

Write A Comment