ಕರ್ನಾಟಕ

ಕೆಂಡಕಾರುವ ಬಿಸಿಲು : ಹೊಲಕ್ಕೆ ಹೋಗದ ರೈತರು, ತೇಕುತ್ತಿರುವ ಜಾನುವಾರುಗಳು

Pinterest LinkedIn Tumblr

Droughtಹುಬ್ಬಳ್ಳಿ, ಏ. ೧೭- ಬೇಸಿಗೆ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಲೇ ಸಾಗಿರುವ ಉತ್ತರ ಕರ್ನಾಟಕದಲ್ಲಿ ಮೈತುಂಬ ಹೊದ್ದುಕೊಂಡಂತೆ ಬರಗಾಲ ಚಾಚಿದ್ದು ಬಹುತೇಕ ಕಡೆಗಳಲ್ಲಿ ನೀರಿಗಾಗಿ ಜನರ ಪರದಾಟ ಹೇಳತೀರದ ಸ್ಥಿತಿ ತಲುಪಿದೆ. ಬಾಗಲಕೋಟ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ ಜಿಲ್ಲೆಗಳು ಧಗಧಗಿಸುವ ಬಿಸಿಲಿನಿಂದ ಕಂದಿ ಹೋಗುತ್ತಿವೆಯೇನೋ ಎಂಬಂಥ ಸ್ಥಿತಿಯಿದೆ.
ಗದಗ ಜಿಲ್ಲೆಯಲ್ಲಿ 40, ಬೆಳಗಾವಿ ಜಿಲ್ಲೆಯಲ್ಲಿ ಬಾಗಲಕೋಟ ಜಿಲ್ಲೆಯಲ್ಲಿ 41, ಧಾರವಾಡ ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಈಗಾಗಲೇ ಗರಿಷ್ಟ ತಾಪಮಾನ 42.2 ಡಿಗ್ರಿ ಸೆಲ್ಸಿಯಸ್‌ನಷ್ಟು ಕಂಡಾಗಿದೆ.
ಇದೆಲ್ಲಕ್ಕೂ ಕಳಸವಿಟ್ಟಂತೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಮೆಡ್ಲೇರಿಯಲ್ಲಿ ಕಳೆದ ದಿ. 14 ರಂದು ತಾಪಮಾನ 43.3 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ.
ಅರೆಮಲೆನಾಡು ಪ್ರದೇಶವಾದ ಹಾವೇರಿ ಜಿಲ್ಲೆಯಲ್ಲಿ ಎಲ್ಲಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಉತ್ತರ ಕರ್ನಾಟಕದಾದ್ಯಂತ ಹೊಲ – ಗದ್ದೆಗಳನ್ನು ರಂಟೆ ಕುಂಟಿ ಹೂಡಿ, ಕಸ-ಕಂಟಿ ತೆಗೆದು ಹಸನುಗೊಳಿಸಬೇಕಾದ ಈ ಸಂದರ್ಭದಲ್ಲಿ ರೈತರು ಬಿರು ಬಿಸಿಲಿನಲ್ಲಿ ಜಮೀನುಗಳಿಗೆ ಹೋಗದಂತಾಗಿದೆ. ಬಿಸಿಲಿನ ಝಳಕ್ಕೆ ಜಾನುವಾರುಗಳು ತೇಕುವಂಥ ಪರಿಸ್ಥಿತಿಯಿದೆ.
ಧಾರವಾಡ ಜಿಲ್ಲೆಯಾದ್ಯಂತ ಕುಂದಗೋಳ, ಧಾರವಾಡ, ಹುಬ್ಬಳ್ಳಿ, ನವಲಗುಂದ, ಕಲಘಟಗಿ ತಾಲೂಕುಗಳಲ್ಲಿ ಮುಂಗಾರು ಮತ್ತು ಹಿಂಗಾರು ಎರಡೂ ವಿಫಲವಾಗಿ ರೈತ ತಲೆಮೇಲೆ ಕೈ ಹೊತ್ತು ಕೂತಿದ್ದರೆ, ಸರ್ಕಾರ ಆರೇಳು ಸಾವಿರ ರೂ.ಗಳ ಪರಿಹಾರವನ್ನಷ್ಟೇ ಹಾಕಿ ಸುಮ್ಮನಾಗಿದೆ.
ಬರದ ಸ್ಥಿತಿ ವೀಕ್ಷಣೆಗಾಗಿ ಕೇವಲ ಅಧಿಕಾರಿಗಳ ತಂಡಗಳು ಬಂದದ್ದು ಹೋದದ್ದು ಬಿಟ್ಟರೆ ಮುಗಿಯಿತು. ಜಿಲ್ಲೆಯಾದ್ಯಂತ ಬೆಳೆವಿಮೆ ಕಂತುಗಳನ್ನು ಸಾಲಸೋಲ ಮಾಡಿ ಕಟ್ಟಿದ ರೈತರಿಗೆ ಒಂದೇ ಒಂದು ಬೆಳೆ ವಿಮೆ ಪರಿಹಾರ ಬರಲಿಲ್ಲ.
ವಿಮೆ ಪರಿಹಾರ ಬರುವುದಿರಲಿ, ಆ ಕುರಿತು ಕನಿಷ್ಠ ದನಿಯೆತ್ತುವವರೂ ಇಲ್ಲದಾಗಿದೆ. ವಿಮೆ ಕಂತು ತುಂಬಿದ್ದು ಏನಾಯಿತೆಂಬುದೇ ರೈತನಿಗೆ ತಿಳಿಯದಂತಾಗಿದೆ.
ಕುಂದಗೋಳ, ನವಲಗುಂದ, ಕಲಘಟಗಿ ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಈ ಭಾಗಗಳ ಬಹುತೇಕ ಕಡೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಅನಿವಾರ್ಯವಾಗಿದೆಯಾದರೆ ಒಬ್ಬರಿಗೆ ಸಿಗುವುದು ಮೂರ್ನಾಲ್ಕು ಕೊಡ ನೀರು ಮಾತ್ರ.
ಧಾರವಾಡ ಬಳಿಯ ಅಳ್ನಾವರ ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿದ್ದ ಡವಗಿಹಳ್ಳದ ಬ್ಯಾರೇಜು ಸಂಪೂರ್ಣ ಬತ್ತಿ ಹೋಗಿದೆ. ಪಕ್ಕದ ಬೆಣಚಿ, ಕಡಬಗಟ್ಟಿ, ಅರವಟಗಿ ಗ್ರಾಮ ಪಂಚಾಯತ್ ಗೆ ಸೇರಿದ್ದ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಯೂ ನೀರಿನ ತೀವ್ರ ಬವಣೆ ಅನುಭವಿಸುವ ಸ್ಥಿತಿಯಿದೆ.
ಬಾಗಲಕೋಟ ಜಿಲ್ಲೆಯಲ್ಲಿ ಪ್ರತಿವರ್ಷಕ್ಕಿಂತ ಈ ವರ್ಷ ಮಳೆ ಇಲ್ಲದೇ ಜಿಲ್ಲೆಯಲ್ಲಿ ಭೀಕರ ಬರಗಾಲ ಉಂಟಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ 57 ಗ್ರಾಮಗಳನ್ನು ಸಮಸ್ಯೆಯಾತ್ಸಕ ಗ್ರಾಮಗಳೆಂದು ಗುರುತಿಸಿದೆ. ಮೇ ತಿಂಗಳಲ್ಲಿ ಈ ಹಳ್ಳಿಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀರು ಒದಗಿಸುವ ಸ್ಥಿತಿ ಉಂಟಾಗಲಿದೆ ಎಂದು ನಿರ್ಧರಿಸಿದೆ.
ಈಗಾಗಲೇ ಕೆಲವೊಂದು ಹಳ್ಳಿಗಳಲ್ಲಿ ಭೀಕರ ಬರಗಾಲ ಇರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಜಾನುವಾರುಗಳನ್ನು ರೈತರು ಕಡಿಮೆ ಬೆಲೆಗೆ ಮಾರುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಾಗಲಕೋಟ ಜಿಲ್ಲೆಯಲ್ಲಿ ಹಾಯ್ದು ಹೋಗಿರುವ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಕೊಳವೆ ಬಾವಿಗಳ ಮೂಲಕ ನೀರು ಪೂರೈಸಿದರೂ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ನದಿ ತೀರದಲ್ಲಿರುವ ಗ್ರಾಮಗಳಿಗೂ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ.
ಒಂದು ಕಡೆ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದು, ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾದರೆ ಬರಗಾಲದಿಂದ ಬೆಳೆಗಳೂ ಸಹ ಒಣಗಿ ಹೋಗಿವೆ. ಕೃಷ್ಣಾ ಮತ್ತು ಘಟಪ್ರಭಾ ನದಿ ಬಾಗಲಕೋಟ ಜಿಲ್ಲೆಗೆ ಜೀವನಾಡಿಯಾಗಿದ್ದರೂ ನದಿಯಲ್ಲಿ ಮಾತ್ರ ನೀರು ಖಾಲಿಯಾಗಿದೆ.
ಬಾಗಲಕೋಟ ಹಳೆ ನಗರದಲ್ಲಿ ಕೊಳವೆ ಬಾವಿ ಮೂಲಕ ನಗರಸಭೆ ನೀರು ಪೂರೈಕೆ ಮಾಡುತ್ತಿದ್ದರೂ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸುತ್ತಿರುವುದರಿಂದ ಜನರು ತೊಂದರೆಗೀಡಾಗಿದ್ದಾರೆ. ಅದೇ ರೀತಿ ನವನಗರದಲ್ಲಿ ಹದಿನೈದು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ. ನವನಗರ ಹಾಗೂ ಹಳೆ ನಗರದಲ್ಲಿ ಉಳ್ಳವರು ಖಾಸಗಿ ಅವರಿಂದ ಐದು ನೂರು ರೂ. ನಿಂದ ಸಾವಿರ ರೂ. ವರೆಗೆ ಟ್ಯಾಂಕರ್ ಮೂಲಕ ನೀರನ್ನು ತರಿಸಿಕೊಳ್ಳುತ್ತಿದ್ದಾರೆ. ಬರಗಾಲ ಮತ್ತು ಮಳೆ ಇಲ್ಲದಿರುವುದರಿಂದ ಖಾನಾವಳಿ ಮತ್ತು ಹೋಟೆಲ್‌ಗಳಲ್ಲಿ ನೀರಿನ ಕೊರತೆ ಇರುವುದರಿಂದ ಕೆಲವೊಂದು ಕಡೆ ವ್ಯಾಪಾರವನ್ನು ಸ್ಥಗಿತಗೊಳಿಸುವಂತಹ ಸ್ಥಿತಿಗೆ ಬಂದಿದೆ.
ಬಾಗಲಕೋಟ ಜಿಲ್ಲೆಯಲ್ಲಿ ಭೀಕರ ಬಲಗಾರ ಮತ್ತು ಮಳೆ ಇಲ್ಲದೆ ರೈತರು, ಜನರು ಕಂಗೆಟ್ಟು ಹೋಗಿದ್ದು, ಇದನ್ನೆಲ್ಲ ಪರಿಶೀಲಿಸಲು ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಬಾಗಲಕೋಟ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಭೇಟಿ ನೀಡುವ ಮೂಲಕ ಜಿಲ್ಲೆಯಲ್ಲಿ ಬರಗಾಲದ ಸಮಸ್ಯೆಗಳು ನಿವಾರಣೆಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಐನಾಪೂರ, ರಾಮದುರ್ಗ, ಬೈಲಹೊಂಗಲ, ಸವದತ್ತಿ, ಖಾನಾಪುರ ತಾಲೂಕುಗಳ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಜನರನ್ನು ಪರದಾಡುವಂತೆ ಮಾಡುತ್ತಿದೆ.
ಕೆಲವೆಡೆ ದೂರ ದೂರದ ಪ್ರದೇಶಗಳಿಂದ ಕೊಡಗಳಲ್ಲಿ ನೀರು ಹೊತ್ತು ತರುವುದು ಅನಿವಾರ್ಯವಾಗಿದೆ. ಬರಪೀಡಿತ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಜನತೆಗೆ ನೆರವಾಗಲು ಕೃಷ್ಣಾನದಿಗೆ ಮಹಾರಾಷ್ಟ್ರ ನೀರು ಹರಿಸಿದರೆ ಕೊಂಚ ಅನುಕೂಲವಾದೀತು. ಕೃಷ್ಣಾನದಿಗೆ ಎರಡು ಟಿ.ಎಂ.ಸಿ, ನೀರು ಬಿಡಲು ಮಹಾರಾಷ್ಟ್ರ ಒಪ್ಪಿಗೆ ನೀಡಿದೆಯೆಂಬ ಮಾಹಿತಿ ಬಂದಿದ್ದು ಅದು ಕಾರ್ಯರೂಪಕ್ಕೆ ಬರಬೇಕಿದೆ.
ಗದಗ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಈ ಭಾರಿ ಭೀಕರ ಬರಗಾಲ ಬಿದ್ದಿರುವುದರಿಂದ ರೈತ ಸಮುದಾಯ ಭಾರಿ ಸಂಕಷ್ಟ ಎದುರಿಸುತ್ತಿದೆ. ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬರ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿವೆ. ಗದಗ ತಾಲೂಕಿನ ಸೊರಟೂರ, ನಾಗಾವಿ, ಬೆಳದಡಿ, ಯಲಶಿರುಂಜ ಗ್ರಾಮಗಳಲ್ಲಿ ಜನತೆ ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ಕೈಗೆ ಕೆಲಸ ಇಲ್ಲದೆ ಅತಿ ಕಷ್ಟದಾಯಕ ಜೀವನ ಎದುರಿಸುತ್ತಿದ್ದಾರೆ. ಗದಗ ನಗರದಲ್ಲಿ ಕುಡಿಯುವ ನೀರಿಗೆ ಜನ ಪರದಾಡುವ ಪರಿಸ್ಥಿತ ಬಂದಿದೆ. ಗ್ರಾಮಗಳಿಂದ 1.5 ಕಿಮೀ ದೂರದ ಹೊಲ ಗದ್ದೆಗಳಿಗೆ ಹೋಗಿ ಕುಡಿಯುವ ನೀರು ತರುವ ಪರಿಸ್ಥಿತಿ ಇದೆ. ಹೊಲಗಳಲ್ಲಿ ಬೆಳೆಗಳಿಗೆ ಸಾಕಾಗುವಷ್ಟು ನೀರು ಬಿಟ್ಟು ಕುಡಿಯಲು ಜನತೆಗೆ ರೈತರು ನೀರು ಕೊಡುತ್ತಿದ್ದಾರೆ. ಮಳೆ ಇಲ್ಲದೆ ಬೆಳೆ ಒಣಗಿ ಹೋಗಿರುವುದರಿಂದ 12.000 ರೂ. ಬೆಳೆ ಪರಿಹಾರ ನೀಡಬೇಕು ಎಂಬ ಒತ್ತಾಯ ರೈತ ಸಮುದಾಯದಲ್ಲಿ ಕೇಳಿ ಬರುತ್ತಿದೆ. ಇಂತಹುದೇ ಭೀಕರ ಬರಗಾಲ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಹಾಗೂ ದೇವರಾಜ ಅರಸ ಅವರ ಆಡಳಿತ ಅವಧಿಯಲ್ಲಿ ಇತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಈ ಬರವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂದು ಪ್ರತಿಪಕ್ಷಗಳು ಹೇಳುತ್ತಿವೆ. ಇದೀಗ ತಾನೇ ಅವರು ತಮ್ಮ ಬರ ಪರಿವೀಕ್ಷಣೆ ಪ್ರವಾಸ ಪ್ರಾರಂಭಿಸಿರುವುದು ರೈತರಲ್ಲಿ ಬೇಸರ ಮೂಡಿಸಿದೆ. ಈ ಬಾರಿಯ ಮುಂಗಡ ಪತ್ರದಲ್ಲಿ ಬರಪರಿಹಾರ ಕಾಮಗಾರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗಿತ್ತು. ಬಿಜೆಪಿ ಶಾಸಕ ಗೋವಿಂದ ಕಾರಜೋಳ ಗದಗ ತಾಲೂಕಿನ ಕೆಲ ಗ್ರಾಮಗಳ ವೀಕ್ಷಣೆ ನಡೆಸಿದ್ದಾರೆ.
ಮುಂಗಾರು ಆರಂಭಕ್ಕೆ ಇನ್ನೂ ಒಂದೂವರೆ ತಿಂಗಳಿದೆ. ಆದರೆ ಅಲ್ಲಿಯವರೆಗೆ ಬೆಳಗಾವಿ ನೀರಿಲ್ಲದೆ ಬಸವಳಿದು ಹೋಗಲಿದೆ ಎಂಬುದಂತೂ ಸತ್ಯ.
ಏಳು ಪ್ರಮುಖ ನದಿಗಳು ಈ ಜಿಲ್ಲೆಯಲ್ಲಿ ಹರಿಯುತ್ತವೆ. ಏಳಕ್ಕೆ ಏಳೂ ನದಿಗಳು ಈಗ ಬತ್ತಿ ಹೋಗಿವೆ!.
ನಿರ್ಮಾಣವಾದಾಗಿನಿಂದ ಈವರೆಗೆ ಬತ್ತದ ಹಿಡ್ಕಲ್ ಜಲಾಶಯ (ರಾಜಾ ಲಖಮ್ ಗೌಡ ಜಲಾಶಯ)ವೂ ಬತ್ತಿ ಹೋಗುತ್ತಿದೆ.
ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಬರಗಾಲವನ್ನೇ ಕಂಡರಿಯದ ಬೆಳಗಾವಿಯ ಪ್ರಮುಖ ಜಲಾಶಯದ ನೀರೇ ಇಂಗಿಹೋಗುತ್ತಿದೆ. ಮುಂದೆ ನೀರಿನ ಸಮಸ್ಯೆಗೆ ಪರಿಹಾರವೇನು ಎಂದು ನಗರಪಾಲಿಕೆ ತಲೆಯ ಮೇಲೆ ಕೈಹೊತ್ತು ಕುಳಿತಿದೆ.
ಕೃಷ್ಣಾ ನದಿಯ ಉಪನದಿಯಾದ ಘಟಪ್ರಭಾಕ್ಕೆ ಅಡ್ಡಲಾಗಿ 1977 ರಲ್ಲಿ ಹುಕ್ಕೇರಿಯಲ್ಲಿ ನಿರ್ಮಿಸಿದ ಹಿಡ್ಕಲ್ ಅಣೆಕಟ್ಟೆ ವರ್ಷವಿಡೀ ಜಿಲ್ಲೆಗೆ ನೀರು ಪೂರೈಸುತ್ತಿತ್ತು.
ಈವರೆಗೆ ಕರ್ನಾಟಕದಲ್ಲಿ ಬಿಸಿಲಿನ ಝಳಕ್ಕೆ ಯಾರೂ ಸತ್ತಿಲ್ಲ ಎಂಬ ನೆಮ್ಮದಿಯೊಂದಿತ್ತು. ಆದರೆ ಈಗ ರಾಯಚೂರಿನಿಂದ ಇಂಥ ಸಾವೊಂದು ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಸತ್ತಿದ್ದು, ಬಸ್ ನಿಂತರೂ ವ್ಯಕ್ತಿ ಏಳದಿದ್ದಾಗ ಕಂಡಕ್ಟರ್ ಎಚ್ಚರಿಸಲು ಪ್ರಯತ್ನಿಸಿ ಸತ್ತಿರುವುದನ್ನು ಖಚಿತಪಡಿಸಿಕೊಂಡು ಪೊಲೀಸರಿಗೆ ದೂರಿತ್ತಿದ್ದಾನೆ.

Write A Comment