ಕರ್ನಾಟಕ

ಬಿಎಸ್‌ವೈಗೆ ಬಿಜೆಪಿ ಪಟ್ಟ 14 ರಂದು ಅಧಿಕಾರ ಸ್ವೀಕಾರ

Pinterest LinkedIn Tumblr

MURGESH NIRANI SEDESHWAR UMESH KATTI GREETTING YUDIURAPPA AT HIS HOUSE

ಬೆಂಗಳೂರು, ಏ. ೯ – ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ಸಾರಥ್ಯವನ್ನು ಮತ್ತೊಮ್ಮೆ ವಹಿಸಿಕೊಡಲಾಗಿದ್ದು, ಇದೇ ತಿಂಗಳ 14 ರಂದು ಯಡಿಯೂರಪ್ಪ ಅವರು 4ನೇ ಬಾರಿಗೆ ಪಕ್ಷದ ರಾಜ್ಯಾಧ್ಯಕ್ಷರಾಗಿ ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಮುಖ್ಯಾಂಶಗಳು

* ರಾಜ್ಯ ಬಿ.ಜೆ.ಪಿ. ನೂತನ ಅಧ್ಯಕ್ಷರಾಗಿ ಯಡಿಯೂರಪ್ಪ ಅವರ ನೇಮಕದಿಂದ ಕಾರ್ಯಕರ್ತರಲ್ಲಿ ಹೊಸ ಸಂಚಲನ.

* ನಗರದಲ್ಲಿ ಈ ತಿಂಗಳ 14ರ ಅಂಬೇಡ್ಕರ್ ಜಯಂತಿಯಂದು ಯಡಿಯೂರಪ್ಪ ಅವರಿಂದ ಅಧಿಕಾರ ಸ್ವೀಕಾರ.

* ಬೃಹತ್ ಕಾರ್ಯಕರ್ತರ ಸಮಾವೇಶ ಏರ್ಪಡಿಸಲು ಚಿಂತನೆ.

* ರಾಜ್ಯದೆಲ್ಲೆಡೆ ಪ್ರವಾಸ ಮಾ‌ಡಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲವರ್ಧನೆ ಮಾಡಲು ಯಡಿಯೂರಪ್ಪ ಸಂಕಲ್ಪ.

* ರಾಜ್ಯದ ಮೂಲೆ ಮೂಲೆಗಳಿಂದ ಬಂದ ನಾಯಕರು, ಕಾರ್ಯಕರ್ತರಿಂದ ಅಭಿನಂದನೆಗಳ ಸುರಿಮಳೆ.

* ತಮಗೆ ಹೊಸ ಜವಾಬ್ದಾರಿ ನೀಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರಮೋದಿ ಹಾಗೂ ಇತರ ಎಲ್ಲಾ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿರುವ ಯಡಿಯೂರಪ್ಪ.

* ಯಡಿಯೂರಪ್ಪ ನೇಮಕದಿಂದಾಗಿ ರಾಜ್ಯ ರಾಜಕಾರಣದಲ್ಲಿ ಗಂಭೀರ ಸ್ವರೂಪದ ಚರ್ಚೆ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಅಧಿಕಾರದ ಹೆಬ್ಬಾಗಿಲು ತೋರಿದ ಯಡಿಯೂರಪ್ಪ ಅವರನ್ನು ಪಕ್ಷದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾ‌ಡುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಗಾರಿಕೆಯನ್ನೂ ಅವರ ಹೆಗಲಿಗೆ ಹೇರಲಾಗಿದೆ.

ಯುಗಾದಿ ಹಬ್ಬದ ದಿನದಂದೇ ದೆಹಲಿಯಲ್ಲಿ ನಿನ್ನೆ ಯಡಿಯೂರಪ್ಪರವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಘೋಷಣೆ ಹೊರಬಿದ್ದಿದ್ದು, ಪಕ್ಷದ ವರಿಷ್ಠರು ಯಡಿಯೂರಪ್ಪನವರಿಗೆ ಯುಗಾದಿ ಹಬ್ಬದ ಉಡುಗೊರೆ ನೀಡಿದ್ದಾರೆ. ಯಡಿಯೂರಪ್ಪ ಅವರಿಗೆ ಪಕ್ಷದ ಪಟ್ಟ ಕಟ್ಟುವ ವಿಚಾರ ಪ್ರಕಟಗೊಳ್ಳುತ್ತಿದ್ದಂತೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿದೆ. ಎಲ್ಲೆಡೆ ಹರ್ಷೋದ್ಗಾರ, ಸಿಹಿ ಹಂಚಿಕೆ, ಪಟಾಕಿಗಳ ಸಿಡಿತ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.

ಯಡಿಯೂರಪ್ಪ ಅವರು ಈ ಮೊದಲು 1989, 1991, 1997 ರಲ್ಲಿ ಪಕ್ಷದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣೀಭೂತರಾದ ಯಡಿಯೂರಪ್ಪ ಅವರು ಅಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದಂತೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಸಡಗರ ಸಂಭ್ರಮ

ಇಂದು ಬೆಳಿಗ್ಗಿನಿಂದಲೇ ಯಡಿಯೂರಪ್ಪನವರ ಡಾಲಱ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸಡಗರ – ಸಂಭ್ರಮ ಮನೆ ಮಾಡಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಬಂದ ನಾಯಕರು, ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಅಭಿನಂದಿಸಿ ಹಾರ -ತುರಾಯಿ ಅರ್ಪಿಸಿದರು.

ಇಂದು ಸಂಜೆ ಯಡಿಯೂರಪ್ಪರವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರಸ್ವಾಮೀಜಿ ಅವರ ಆಶೀರ್ವಾದ ಪಡೆಯಲಿದ್ದಾರೆ.

ದೆಹಲಿಯ ಬಿಜೆಪಿ ಪಕ್ಷದ ಕಛೇರಿಯಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ಅರುಣ್ ಸಿಂಗ್ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಯಡಿಯೂರಪ್ಪನವರ ನೇಮಕಾತಿಯನ್ನು ಪ್ರಕಟಿಸಿದರು.

ಇದೇ ವೇಳೆ 5 ರಾಜ್ಯಗಳ ನೂತನ ಅಧ್ಯಕ್ಷರ ನೇಮಕಾತಿಯನ್ನು ಪ್ರಕಟಿಸಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರವರು ಪಕ್ಷದ ಇತರ ವರಿಷ್ಠ ನಾಯಕರೊಡನೆ ಚರ್ಚಿಸಿ, ನೂತನ ಅಧ್ಯಕ್ಷರ ನೇಮಕಾತಿಗಳನ್ನು ಅಂತಿಮಗೊಳಿಸಿದ್ದಾರೆ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಪ್ರಹ್ಲಾದ್ ಜೋಷಿಯವರ ಅಧಿಕಾರಾವಧಿ ಮಾರ್ಚ್‌ಗೆ ಅಂತ್ಯವಾಗಿದ್ದು, ನೂತನ ರಾಜ್ಯಾಧ್ಯಕ್ಷರ ನೇಮಕ ಕುತೂಹಲ ಮೂಡಿಸಿತ್ತು. ಅಧ್ಯಕ್ಷ ಹುದ್ದೆಗೆ ನಳಿನ್ ಕುಮಾರ್ ಕಟೀಲು, ಸಿ.ಟಿ. ರವಿ, ಇವರುಗಳ ಹೆಸರು ಕೇಳಿ ಬಂದಿತ್ತು.

ಆದರೆ, ಅಂತಿಮವಾಗಿ ಯಡಿಯೂರಪ್ಪನವರ ಹೆಸರನ್ನು ಅಧ್ಯಕ್ಷಗಾದಿಗೆ ಪರಿಗಣಿಸುವ ಮೂಲಕ ಪಕ್ಷದ ಹೈಕಮಾಂಡ್ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದೆ.

ಯಡಿಯೂರಪ್ಪರವರನ್ನು ಮತ್ತೆ ಅಧ್ಯಕ್ಷರನ್ನಾಗಿಸಬೇಕು ಎಂಬ ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ವರಿಷ್ಠರು ಮಣಿದಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಮ್ಮದೇ ಆದ ಮೂಲಗಳಿಂದ ಅಭಿಪ್ರಾಯ ಸಂಗ್ರಹಿಸಿ, ಪಕ್ಷದ ಕೆಲ ಮುಖಂಡರು ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಹುದ್ದೆ ತಪ್ಪಿಸಲು ಪ್ರಯತ್ನ ನಡೆಸಿದ್ದರಾದರೂ ಅದಕ್ಕೂ ಪಕ್ಷದ ವರಿಷ್ಠರು ಸೊಪ್ಪು ಹಾಕಿಲ್ಲ.

ಮುಂದಿನ ರಾಜಕೀಯ ಆಗು-ಹೋಗುಗಳನ್ನು ಗಮನದಲ್ಲಿಟ್ಟುಕೊಂಡು, ಯಡಿಯೂರಪ್ಪ ನೇಮಕದ ತೀರ್ಮಾನ ಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಅಮಿತ್‌ಗೆ ಧನ್ಯವಾದ

ನೂತನ ರಾಜ್ಯಾಧ್ಯಕ್ಷರ ನೇಮಕ ಸಂದರ್ಭದಲ್ಲಿ ನಿನ್ನೆ ದೆಯಲಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇಮಕಾತಿ ಪ್ರಕಟಣೆ ಹೊರಬಿದ್ದ ತಕ್ಷಣವೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರವರನ್ನು ಭೇಟಿ ಮಾಡಿ ಧನ್ಯವಾದ ಹೇಳಿದರು.

ಪ್ರಧಾನಿಗೆ ಪತ್ರ

ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.

Write A Comment